ಶ್ರೀನಿವಾಸಪುರ: ಪಟ್ಟಣದಲ್ಲಿ ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಸಿಬ್ಬಂದಿ  ಸಾರ್ವಜನಿಕ ಸ್ಥಳಗಳಲ್ಲಿ ಔಷಧ ಸಿಂಪಡಣೆ ಮಾಡಿದರು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದಲ್ಲಿ ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಸಿಬ್ಬಂದಿ  ಸಾರ್ವಜನಿಕ ಸ್ಥಳಗಳಲ್ಲಿ ಔಷಧ ಸಿಂಪಡಣೆ ಮಾಡಿದರು.
ಪುರಸಭೆ ವತಿಯಿಂದ ಪಟ್ಟಣದಲ್ಲಿ ಸ್ವಚ್ಛತೆ ಪಾಲನೆಗೆ ಮೊದಲ ಆದ್ಯತೆ ನೀಡಲಾಗಿದೆ. ಕೊರೊನಾ ವೈರಸ್‌ ತಡೆಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಈಗ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲೂ ಔಷಧ ಸಿಂಪಡಣೆ ಮಾಡಲಾಗುವುದು. ಈಗಾಗಲೇ ಸಿಂಪಡಣಾ ಕಾರ್ಯ ಪ್ರಾರಂಭಿಸಲಾಗಿದೆ. ಸಿಂಪಡಣೆಗೆ ಅಗತ್ಯವಾದ ವಾಹನ ಹಾಗೂ ಸಲಕರಣೆಗಳನ್ನು ಸಿದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್‌ ವರದಿಗಾರ‘ಗೆ ತಿಳಿಸಿದರು.
ಪಟ್ಟಣದ ನಾಗರಿಕರು ಹಾಗೂ ಪಟ್ಟಣಕ್ಕೆ ಬಂದು ಹೋಗುವ ಜನರು ಕೊರೊನಾ ನಿಯಂತ್ರಣಕ್ಕೆ ವಿಧಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗುಂಪಾಗಿ ಓಡಾಡುವುದನ್ನು ನಿಲ್ಲಿಸಬೇಕು. ಆರೋಗ್ಯ ಇಲಾಖೆ ಮಾಡಿರುವ ಸಲಹೆ ಹಾಗೂ ಸೂಚನೆಗಳನ್ನು ತಪ್ಪದೆ ಅನುಸರಿಸಬೇಕು ಎಂದು ಸಲಹೆ ಮಾಡಿದರು.
ಸಂಕಷ್ಟದ ಸಂದರ್ಭದಲ್ಲಿ ಪಟ್ಟಣದ ನಾಗರಿಕರು ಪುರಸಭೆ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಪರಿಸರ ಮಾಲಿನ್ಯಕ್ಕೆ ಎಡೆಗೊಡಬಾರದು. ಸಿಬ್ಬಂದಿ ರೋಗ ನಿರೋಧಕ ಔಷಧ ಸಿಂಪರಣೆ ಮಾಡಲು ಬಂದಾಗ, ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು 
ಹೇಳಿದರು.
ಪಟ್ಟಣದಲ್ಲಿ ಈಗಾಗಲೇ ಹೋಟೆಲ್‌, ಚಹಾ ಅಂಗಡಿ, ಚಿತ್ರ ಮಂದಿರ ಮುಚ್ಚಲಾಗಿದೆ. ಕತ್ತರಿಸಿದ ಹಣ್ಣು ಮಾರಾಟ ನಿಷೇಧಿಸಲಾಗಿದೆ. ಮಾಂಸದ ಅಂಗಡಿಗಳು ಬಂದಾಗಿವೆ. ಪಟ್ಟಣಕ್ಕೆ ಗ್ರಾಮೀಣ ಪ್ರದೇಶದಿಂದ ಬರುವ ಜನರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಿದರು.