ಎಸ್ಸೆಸ್ಸೆಲ್ಸಿ ಪರೀಕ್ಷಾ ಮುಖ್ಯ ಅಧೀಕ್ಷಕರಿಗೆ ತರಬೇತಿ ಕಾರ್ಯಾಗಾರ ಪರೀಕ್ಷಾ ಮಂಡಳಿ ಮಾರ್ಗಸೂಚಿಯಂತೆ ಕೆಲಸ ಮಾಡಿ-ಕೆ.ರತ್ನಯ್ಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಎಸ್ಸೆಸ್ಸೆಲ್ಸಿ ಪರೀಕ್ಷಾ ಮುಖ್ಯ ಅಧೀಕ್ಷಕರಿಗೆ ತರಬೇತಿ ಕಾರ್ಯಾಗಾರ
ಪರೀಕ್ಷಾ ಮಂಡಳಿ ಮಾರ್ಗಸೂಚಿಯಂತೆ ಕೆಲಸ ಮಾಡಿ-ಕೆ.ರತ್ನಯ್ಯ

 

 

 

 

ಕೋಲಾರ:- ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಣ್ಣಪುಟ್ಟ ತಪ್ಪುಗಳಿಗೂ ಅವಕಾಶ ನೀಡದೇ ಸುಗಮ ಪರೀಕ್ಷೆ ನಡೆಸುವ ಹೊಣೆ ನಿಮ್ಮದಾಗಿದ್ದು, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿಯಂತೆ ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ಕೆಲಸ ಮಾಡಿ ಎಂದು ಮುಖ್ಯ ಅಧೀಕ್ಷಕರಿಗೆ ಡಿಡಿಪಿಐ ಕೆ.ರತ್ನಯ್ಯ ತಾಕೀತು ಮಾಡಿದರು.
ಬುಧವಾರ ನಗರದ ಆರ್‍ವಿ ಅಡ್ವೆಂಟ್ ರೈಡ್ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರ್.ವಿ.ಇಂಟರ್ ನ್ಯಾಷನಲ್ ಶಾಲೆ ಆಶ್ರಯದಲ್ಲಿ ಜಿಲ್ಲೆಯ ಎಲ್ಲಾ 70 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು,ಉಪಮುಖ್ಯಅಧೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವಸಿದ್ದತಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಖಜಾನೆಯಿಂದ ಬಂದ ಪ್ರಶ್ನೆಪತ್ರಿಕೆ ಪಡೆದ ನಂತರ ಪರೀಕ್ಷೆ ಮುಗಿಸಿ ಉತ್ತರ ಪತ್ರಿಕೆಗಳ ಲಕೋಟೆಯನ್ನು ಕಳುಹಿಸುವವರೆಗೂ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದರು.
ಪರೀಕ್ಷಾ ಕೇಂದ್ರಗಳ ಸುಸ್ಥಿತಿಯ ಕುರಿತು ಗಮನಹರಿಸಿ, ಮಕ್ಕಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಕೂರಿಸುವಂತಿಲ್ಲ, ಶೌಚಾಲಯ, ಕುಡಿಯುವ ನೀರು, ಬೆಳಕು ಎಲ್ಲಾ ವಿಷಯಗಳ ಬಗ್ಗೆಯೂ ಮುಖ್ಯ ಅಧೀಕ್ಷಕರು ಕೇಂದ್ರಕ್ಕೆ ಹೋಗಿ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಿ, ಏನೇ ತಪ್ಪು ನಡೆದರೂ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು.
ಪರೀಕ್ಷಾ ಕೊಠಡಿಗಳಲ್ಲಿ ವಿನಾಕಾರಣ ಓಡಾಡಿ ಮಕ್ಕಳ ಏಕಾಗ್ರತೆಗೆ ಧಕ್ಕೆ ತರಬಾರದು, ಪ್ರತಿಕೊಠಡಿಗೂ ಪ್ರತ್ಯೇಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಕೊಠಡಿ ಮೇಲ್ವಿಚಾರಕರೇ ನೀರು ಕೊಟ್ಟರೆ ಅವಮಾನವಾಗಲಾರದು, ಅವರು ನಮ್ಮ ಮಕ್ಕಳೇ ಅಲ್ಲವೇ ಎಂದ ಅವರು, ಸಮಯಪ್ರಜ್ಞೆ ಶಿಕ್ಷಕರಲ್ಲೂ ಮೂಡಿಸಿ ಎಂದರು.
ಪರೀಕ್ಷಾ ಪಾವಿತ್ರ್ಯತೆಗೆ
ಧಕ್ಕೆತಾರದಿರಲು ಕರೆ
ಗುಣಾತ್ಮಕ ಫಲಿತಾಂಶ ನಮ್ಮ ಗುರಿಯಾಗಿದೆ, ಪರೀಕ್ಷಾ ಪಾವಿತ್ರ್ಯತೆ ಧಕ್ಕೆ ತಾರದಂತೆ ಎಚ್ಚರವಹಿಸುವ ಹೊಣೆ ನಿಮ್ಮದಾಗಿದೆ, ಕೇಂದ್ರಗಳ ಮುಖ್ಯ ಅಧೀಕ್ಷಕರು ಬದ್ದತೆಯಿಂದ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಎದುರಾಗಲಾಗದು ಎಂದರು.
ಪರೀಕ್ಷಾ ಕೇಂದ್ರಕ್ಕೆ ಅನಧಿಕೃತ ವ್ಯಕ್ತಿಗಳಿಗೆ ಹೊರ ಬರಲು ಅವಕಾಶ ನೀಡದಿರಿ, ಇಡೀ ಕೇಂದ್ರಕ್ಕೆ ನೀವೇ ಸುಪ್ರೀಂ ಆಗಿದ್ದೀರಿ, ಅಲ್ಲಿನ ಎಲ್ಲಾ ಹೊಣೆಗಾರಿಕೆ ನಿಮ್ಮದೇ ಆಗಿರುವುದರಿಂದ ಅತಿ ಎಚ್ಚರಿಕೆ ನಿಮ್ಮದೇ ಆಗಿದೆ, ನಿಮ್ಮೊಂದಿಗೆ ಇಡೀ ಪರೀಕ್ಷಾ ಕಾರ್ಯ ಮುಗಿಯುವರೆಗೂ ಇತರೆ ಸಿಬ್ಬಂದಿ ಇರಬೇಕು ಎಂದರು.
ಕೊರೋನಾ ಗಾಬರಿ
ಬೇಡ-ಬಿಇಒ
ಮಕ್ಕಳಿಗೆ ಕೊರೋನಾ ಭೀತಿ ಉಂಟು ಮಾಡದಿರಿ, ಅವರಿಗೆ ಆತ್ಮಸ್ಥೈರ್ಯ ತುಂಬಿ ಎಂದ ಅವರು, ಮಕ್ಕಳು ಪರೀಕ್ಷೆ ಸಂದರ್ಭದಲ್ಲಿ ನೇರಮನೆಯಿಂದಲೇ ತೆರಳಲಿ, ಶಾಲೆಗೆ ಬರುವುದು ಬೇಡ ಎಂದರು.
ಸ್ವಚ್ಚತೆಯ ಅರಿವು ಮೂಡಿಸಿ ಮಾಸ್ಕ್ ಬಳಕೆಗೆ ಸಲಹೆ ನೀಡಿ, ಕೈತೊಳೆಯುವ ಅಭ್ಯಾಸ, ಆರೋಗ್ಯ ರಕ್ಷಣೆಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದರು.
70 ಕೇಂದ್ರಗಳಲ್ಲಿ
20906 ವಿದ್ಯಾರ್ಥಿಗಳು
ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಪರೀಕ್ಷಾಕಾರ್ಯಗಳ ಮಾಹಿತಿ ನೀಡಿದ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಪರೀಕ್ಷಾ ಕಾರ್ಯಗಳಿಗೆ ನೇಮಿಸಿಕೊಳ್ಳುವ ಶಿಕ್ಷಕರ ಪಟ್ಟಿಯನ್ನು ಕಡ್ಡಾಯವಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮೋದಿಸಿರಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 70 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟು 20906 ವಿದ್ಯಾರ್ಥಿಗಳು ಪರೀಕಷೆ ಬರೆಯಲಿದ್ದಾರೆ, ಬಂಗಾರಪೇಟೆಯಲ್ಲಿ 11, ಕೆಜಿಎಫ್‍ನಲ್ಲಿ 9, ಕೋಲಾರದಲ್ಲಿ 17, ಮಾಲೂರಿನಲ್ಲಿ 9, ಮುಳಬಾಗಿಲಿನಲ್ಲಿ 11 ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒಟ್ಟು 13 ಕೇಂದ್ರಗಳಿವೆ ಎಂದು ತಿಳಿಸಿದರು.
ಮೊಬೈಲ್ ಸ್ವಾಧೀನಕ್ಕೆ
ಅಧಿಕಾರಿ ನೇಮಕ
ಇದೇ ಮೊದಲಬಾರಿಗೆ ಮೊಬೈಲ್ ಸ್ವಾಧೀನಾಧಿಕಾರಿಯನ್ನು ನೇಮಿಸಲಾಗಿದ್ದು, ಅವರು, ವಿದ್ಯಾರ್ಥಿಗಳಿಂದ, ಕೊಠಡಿ ಮೇಲ್ವಿಚಾರಕರಿಂದ ಮೊಬೈಲ್ ಸ್ವಾಧೀನ ಪಡಿಸಿಕೊಂಡು ಪರೀಕ್ಷೆ ನಂತರ ವಾಪಸ್ಸು ನೀಡುವ ಕಾರ್ಯ ಮಾಡಲಿದ್ದಾರೆ ಎಂದರು.

ಪರೀಕ್ಷಾ ಕೇಂದ್ರದಲ್ಲಿ ಕೆಲಸ ಮಾಡುವ ವಾಟರ್‍ಬಾಯ್‍ನಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲಾ ಸಿಬ್ಬಂದಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಮುದ್ರಿಸಿದ ಗುರುತಿನ ಚೀಟಿ ನೀಡಿದೆ, ಅದನ್ನೇ ಬಳಸಬೇಕು, ಗುರುತಿನ ಚೀಟಿ ಇಲ್ಲದ ವ್ಯಕ್ತಿಗಳನ್ನು ಕೇಂದ್ರದಲ್ಲಿ ಸೇರಿಸಬಾರದು ಎಂದರು.
ಕೊಠಡಿ ಮೇಲ್ಚಿಚಾರಕರನ್ನು ಲಾಟರಿ ಮೂಲಕವೇ ಆಯ್ಕೆ ಮಾಡಿ ಎಂದ ಅವರು, ಅವರು ಪರೀಕ್ಷೆ ಆರಂಭದ ಅರ್ಧಗಂಟೆ ಮೊದಲು ಹಾಜರಿರುವಂತೆ ತಿಳಿಸಿ, ತಪ್ಪಿದಲ್ಲಿ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿ ಎಂದರು.
ಈಗಾಗಲೇ ಪರೀಕ್ಷಾ ಉತ್ತರ ಪತ್ರಿಕೆ ಅಥವಾ ಬುಕ್ ಲೆಟ್‍ಗಳು ಬಂದಿದ್ದು, ಇಂದೇ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮುಖ್ಯ ಅಧೀಕ್ಷಕರು ಪಡೆದುಕೊಳ್ಳಬೇಕು ಎಂದರು.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಅವರ ಜೀವನದಲ್ಲಿ ಇದು ಮೊದಲ ಪಬ್ಲಿಕ್ ಪರೀಕ್ಷೆಯಾಗಿದ್ದು, ಅವರ ಆತ್ಮಸ್ಥೈರ್ಯ ಕುಂದುವ ರೀತಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದರು.
ಖಜಾನೆಯಿಂದ 31 ಮಾರ್ಗಗಳಲ್ಲಿ ಪ್ರಶ್ನೆಪತ್ರಿಕೆ ಪೊಲೀಸ್ ಬಂದೋಬಸ್ತ್‍ನೊಂದಿಗೆ ತೆರಳಲಿದ್ದು, ಇದಕ್ಕಾಗಿ 31 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಅನ್ಯಮಾರ್ಗಬೇಡ
ಬದ್ದತೆಯಿಂದಿರಿ
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಪರೀಕ್ಷೆಯಲ್ಲಿ ಲೋಪಗಳಿಗೆ ಅವಕಾಶ ಬೇಡ, ಅನ್ಯಮಾರ್ಗಬೇಡ, ಮಾರ್ಗಸೂಚಿಯಂತೆ ಕೆಲಸ ಮಾಡಿ, ಅನುಪಾಲನೆ,ಅನುಷ್ಟಾನದಲ್ಲಿ ಗೊಂದಲ ಬೇಡ ಎಂದು ತಾಕೀತು ಮಾಡಿದರು.
ಮಾರ್ಗಾಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಪಡೆಯುವುದರಿಂದ ಅಂತಿಮವಾಗಿ ಉತ್ತರ ಪತ್ರಿಕೆಗಳ ಬಂಡಲ್‍ಅನ್ನು ಸೀಲ್ ಮಾಡಿ ಕಳುಹಿಸುವವರೆಗೂ ಮುಖ್ಯ ಅಧೀಕ್ಷಕರು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು, ಕೇಂದ್ರದಲ್ಲಿ ನಿರ್ವಹಿಸಬೇಕಾದ ದಾಖಲೆಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ, ಸಿದ್ದರಾಜು,ಗಿರಿಜೇಶ್ವರಿದೇವಿ, ಡಿವೈಪಿಸಿ ಮೋಹನ್ ಬಾಬು, ವಿಷಯ
ವಿಷಯ ಪರಿವೀಕ್ಷಕರಾದ ಗಾಯತ್ರಿ,ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ, ತಾಲ್ಲೂಕು ಪರೀಕ್ಷಾ ನೋಡಲ್ ಅಧಿಕಾರಿಗಳಾದ ಸಿ.ಎಂ.ವೆಂಕಟರಮಣಪ್ಪ, ಮುನಿರತ್ನಯ್ಯಶೆಟ್ಟಿ, ತಿಮ್ಮರಾಯಪ್ಪ, ಬಾಬು, ಸುಬ್ರಮಣಿ,ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಮತ್ತಿತರರಿದ್ದು, ಆರ್‍ವಿ ಶಾಲೆಯ ಶಿಕ್ಷಕಿ ಎಂ.ಎಸ್.ಮಮತಾ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆ ಎಲ್ಲಾ 70 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು,ಉಪಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಹಾಜರಿದ್ದು, ಖುಷಿ ಪ್ರಾರ್ಥಿಸಿದರು. ಸಭೆಯ ಆರಂಭದಲ್ಲಿ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.