ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ವರ್ತಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯ
ಶ್ರೀನಿವಾಸಪುರ: ವರ್ತಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 28 ರಂದು ಶ್ರೀನಿವಾಸಪುರದಲ್ಲಿ ಪ್ರತಿಭಟನೆ ನಡೆಸಿ ಬಂದ್ ಆಚರಿಸಲಾಗುವುದು ಎಂದು ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಸೂರ್ಯನಾರಾಯಣಶೆಟ್ಟಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಗ್ರಾಹಕ ವಸ್ತುಗಳ ವಿತರಕರ ಕ್ಷೇಮಾಭಿವೃದ್ಧಿ ಸಂಘ, ವಿತರಕರು ಹಾಗೂ ವರ್ತಕರ ಸಂಘಗಳ ಒಕ್ಕೂಟ, ಸ್ಥಳೀಯ ವಿತರಕರ ಸಂಘದ ವತಿಯಿಂದ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಸಭೆ, ಪುರಸಭೆಯಿಂದ ಟ್ರೇಡ್ ಲೈಸೆನ್ಸ್ ಪಡೆಯುವುದನ್ನು ರದ್ದುಪಡಿಸಬೇಕು. ಸರ್ಕಾರ ಸಾಮಾನ್ಯ ವರ್ತಕರ ಹಿತದೃಷ್ಟಿಯಿಂದ ಆನ್ಲೈನ್ ವ್ಯವಹಾರ ರದ್ದುಗೊಳಿಸಬೇಕು. ಬೃಹತ್ ಮಾಲ್ಗಳಲ್ಲಿ ನೀಡುತ್ತಿರುವ ರಿಯಾಯಿತಿಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ನೀಡಬೇಕು. ವಾಣಿಜ್ಯೋದ್ಯಮಿಗಳು ವಿಧಾನ ಪರಿಷತ್ತಿನಲ್ಲಿ ಪ್ರತಿನಿಧಿಸಲು ಒಂದು ಕ್ಷೇತ್ರ ಮೀಸಲಿಡಬೇಕು. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವರ್ತಕರ ಸಮುದಾಯ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಫೆ. 28 ರಂದು ಪಟ್ಟಣದಲ್ಲಿ ಪ್ರತಿಭಟನೆ ಹಾಗೂ ಸ್ವಯಂ ಪ್ರೇರಿತ ಬಂದ್ ಆಚರಿಸಲಾಗುವುದು ಎಂದು ಹೇಳಿದರು.
ವಿವಿಧ ವರ್ತಕ ಸಂಘಟನೆಗಳ ಮುಖಂಡರಾದ ವೈ.ಆರ್.ಶಿವಪ್ರಕಾಶ್, ಆದೆಪ್ಪ ಶೆಟ್ಟಿ, ಟಿ.ಸಿ.ಛಾಯಾನಾಥ್, ಬಿ.ಅರವಿಂದ್, ಪ್ರದೀಪ್ ಕುಮಾರ್, ಆರ್.ಬಿ.ನಾಗೇಂದ್ರ ಬಾಬು, ಕೃಷ್ಣಯ್ಯ ಶೆಟ್ಟಿ, ಸುಜಯ್, ಮಂಜುನಾಥ್, ಸಂತೋಷ್, ಪದ್ಮೇಶ್, ಚೇತನ್, ನರೇಂದ್ರ, ಸುನಿಲ್, ಟಿ.ಗಿರೀಶ್ ಇದ್ದರು.