ಶ್ರೀನಿವಾಸಪುರ: ಹೆಣ್ಣು ಭ್ರೂಣ ಹತ್ಯೆ ಮಾಡಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಆರ್‌.ದೇವರಾಜು ಹೇಳಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಹೆಣ್ಣು ಭ್ರೂಣ ಹತ್ಯೆ ಮಾಡಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಆರ್‌.ದೇವರಾಜು ಹೇಳಿದರು. 
  ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ  ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೆ ಹೆಣ್ಣು ಗಂಡಿನ ಅನುಪಾತದಲ್ಲಿ ಏರುಪೇರಾಗಿದೆ. ಇದು ಹಲವು ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ ಎಂದು ಹೇಳಿದರು.
  ಪೋಷಕರು ಲಿಂಗ ತಾರತಮ್ಯ ಮಾಡದೆ ತಮ್ಮ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಇಬ್ಬರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕು ಇದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
  ವಕೀಲರ ಸಂಘದ ಅಧ್ಯಕ್ಷ ಜಯರಾಮೇಗೌಡ ಮಾತನಾಡಿ, ಆಸ್ತಿ ಪಾಲು ಮಾಡಿಕೊಳ್ಳುವಾಗ ತಾಳ್ಮೆಯಿಂದ ವ್ಯವಹರಿಸಬೇಕು. ಎಲ್ಲವನ್ನೂ ಕಾನೂನು ಬದ್ದವಾಗಿ ನಿರ್ವಹಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಭೂ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು  ಹೇಳಿದರು.
  ಜೆಎಂಏಫ್‌ಸಿ ನ್ಯಾಯಾಲಯದ ಅಪರ ನ್ಯಾಯಾಧೀಶ ನಾಗೇಶ್‌ ನಾಯಕ್‌, ಪುರಸಭೆ ಅಧ್ಯಕ್ಷ ವಿ.ಮೋಹನ್‌ ಕುಮಾರ್‌, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್‌, ಪರಿಸರ ನಿರೀಕ್ಷಕ ಶೇಖರ್‌ರೆಡ್ಡಿ, ಕಂದಾಯ ನಿರೀಕ್ಷಕ ಶಂಕರ್‌, ವಕೀಲರಾದ ಟಿ.ವೆಂಕಟೇಶ್‌, ರಾಜಗೋಪಾಲರೆಡ್ಡಿ, ಶ್ರೀನಿವಾಸಗೌಡ, ಕೆ.ಶಿವಪ್ಪ, ಜಿ.ವೆಂಕಟರವಣಪ್ಪ, ಮುರಳಿ, ರೂಪ, ವೆಂಕಟೇಶ್‌, ಪ್ರವೀಣ್‌ ಇದ್ದರು.