ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ-ಗಂಗಾಧರ್ ಸಿ.ಹೆಚ್

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ-ಗಂಗಾಧರ್ ಸಿ.ಹೆಚ್
ಕೋಲಾರ: ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಉಚಿತ ಕಾನೂನು ಸೇವೆಗಳನ್ನು ನೀಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ್ ಸಿ. ಹೆಚ್ ಅವರು ತಿಳಿಸಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೋಲಾರ, ಬಚಪನ್ ಬಚಾವೋ ಅಂದೋಲನ, ಬುದ್ದ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಸಿಸಂದ್ರ. ಕ್ರೇಜಿ ಕ್ರಿಯೇಟರ್ಸ್ ಸಾಂಸ್ಕøತಿಕ ಕ್ರೀಡಾ ಸಂಘ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಅಂಗನವಾಡಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ  ದೇಶದಲ್ಲಿ ಅನೇಕರು ಅನಕ್ಷರಸ್ಥರು ಹಾಗೂ  ಬಡವರಿದ್ದಾರೆ. ಎಲ್ಲರೂ ಸಹ ನ್ಯಾಯಾಲಯಕ್ಕೆ ಹೋಗಿ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಆಗುವುದಿಲ್ಲ. ಇದರಿಂದ ಮನಗೊಂಡ ಸರ್ಕಾರ 1977 ರಲ್ಲಿ ಕಾನೂನು ಸೇವಾ ಅಧಿನಿಯಮ ಪ್ರಾಧಿಕಾರ ಜಾರಿಗೆ ತಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ವಾರ್ಷಿಕ 3 ಲಕ್ಷ ರೂ.ಕ್ಕಿಂತ ಕಡಿಮೆ ಆದಾಯ ಇರುವವರಿಗೆ ಉಚಿತವಾದ ಕಾನೂನಿನ ಅರಿವು ಮತ್ತು ನೆರವು ನೀಡುವ ಉದ್ದೇಶದಿಂದ ಈ ಪ್ರಾಧಿಕಾರವನ್ನು ಜಾರಿಗೆ ತಂದರು. 1995 ರಿಂದ ಈ ಪ್ರಾಧಿಕಾರವು ರಾಷ್ಟ್ರಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವೆಗಳ ಸಮಿತಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಈಗಾಗಲೇ ನ್ಯಾಯಾಲಯಗಳಲ್ಲಿ ಇರುವಂತಹ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಲೋಕ್ ಅದಾಲತ್ ಮಾಡಿ ಬಗೆಹರಿಸಲಾಗುವುದು. ಅದೇ ರೀತಿ ಗ್ರಾಮಮಟ್ಟದ ಶಾಲೆಗಳಲ್ಲಿ ಇಂತಹ ರೀತಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ ಎಂದರು.
ಬಚ್‍ಪನ್ ಬಚಾವೋ ಆಂದೋಲನ ರಾಜ್ಯ ಸಂಯೋಜಕರಾದ ಬಿನು ವರ್ಗಿಸ್ ಮಾತನಾಡಿ, ಕಾರ್ಯಾಗಾರವು ಮಕ್ಕಳ ಹಿತದೃಷ್ಟಿಯನ್ನಿಟ್ಟುಕೊಂಡು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೊಡನೆ ಹೇಗೆ ವರ್ತಿಸಬೇಕು, ಅವರ ಪಾಲನೆ ಪೋಷಣೆ ಹೇಗೆ ಮಾಡಬೇಕು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೇಗೆ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಂಡಿದೆ. ಬಾಲ ನ್ಯಾಯ ಕಾಯ್ದೆಯನ್ವಯ ಮಕ್ಕಳಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಸಿಗದಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಜನ ಸಮುದಾಯಕ್ಕೆ ಕಾನೂನಿನ ಮಾಹಿತಿ ಸಿಗಬೇಕು ಎಂದು ತಿಳಿಸಿದರು. 
ವಕೀಲರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ರವರು ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾಮಾಜಿಕವಾಗಿ ಮತ್ತು  ಆರ್ಥಿಕವಾಗಿ ಎಲ್ಲಾ ರಂಗಗಳಲ್ಲಿಯೂ ಮುಂದುವರೆದಿದ್ದು,  ಬಾಲಕಾರ್ಮಿಕ, ಬಾಲ್ಯವಿವಾಹ ಪದ್ದತಿಯ ಪಿಡುಗು ಮುಂದುವರೆದಿದೆ. ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡನೀಯ ಘನ ಘೋರವಾಗುವಂತದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತರ ಸಂಬಳದ ಬಗ್ಗೆ ಕಾನೂನು ಸೇವಾ ಪ್ರಾಧಿಕಾರ ಅವಕಾಶ ಕೊಟ್ಟರೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಚೌಡಪ್ಪ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣಾಧಿಕಾರಿಗಳಾದ ಜಗದೀಶ್, ಜಿಲ್ಲಾ ಪರಿವೀಕ್ಷಣಾಧಿಕಾರಿಗಳಾದ ಮಹೇಶ್, ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.