ಶ್ರೀನಿವಾಸಪುರ:. ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಿ ಆರ್ಥಿಕ ಲಾಭ ಪಡೆಯಬೇಕು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ:. ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಿ ಆರ್ಥಿಕ ಲಾಭ ಪಡೆಯಬೇಕು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು. 
  ಪಟ್ಟಣದ ಕೋಚಿಮುಲ್‌ ಶಿಬಿರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಹಸು ಕಳೆದುಕೊಂಡಿದ್ದ ಫಲಾನುಭವಿಗಳಿಗೆ ಹಸು ವಿಮೆ ಚೆಕ್‌ ವಿತರಿಸಿ ಮಾತನಾಡಿ, ಬೇರೆ ಬೇರೆ ಕಾರಣಗಳಿಂದ ಹಾಲು ಉತ್ಪಾದನಾ ಪ್ರಮಾಣ ಕುಸಿಯುತ್ತಿದೆ. ತಾಲ್ಲೂಕಿನಲ್ಲಿ ಈ ಹಿಂದೆ ದಿನವೊಂದಕ್ಕೆ 74 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿತ್ತು. ಈಗ ಅದು 54 ಸಾವಿರ ಲೀಟರ್‌ಗೆ ಇಳಿದಿದೆ ಎಂದು ಹೇಳಿದರು.
  ಹಾಲು ಉತ್ಪಾದಕರು ಹಾಲು ಒಕ್ಕೂಟದ ಲಾಭ ಪಡೆಯಲು ಖಾಸಗಿ ಡೇರಿಗಳಿಗೆ ಹಾಲು ಹಾಕದೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕಬೇಕು. ಹಾಲು ಒಕ್ಕೂಟದಿಂದ, ಹಾಲು ಉತ್ಪಾದಕರಿಗೆ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ. ತಾಲ್ಲೂಕಿನಲ್ಲಿ ಈಗ 20 ಹಾಲು ಶೈತ್ಯೀಕರಣ ಘಟಕಗಳಿದ್ದು, ಇನ್ನೂ 8 ಘಟಕಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು. ಸಾಮೂಹಿಕ ಹಾಲು ಹಿಂಡುವ ಯಂತ್ರಗಳನ್ನು ಒದಗಿಸಲಾಗುವುದು. ಕೌ ಮ್ಯಾಟ್‌ಗಳನ್ನು ನೀಡಲಾಗುವುದು. ಅಗತ್ಯ ಇರುವ ಕಡೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಗತ್ಯವಾದ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
    ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ತಾಲ್ಲೂಕು ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದೆ. 10 ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಕಾರಣರಾದ ಒಕ್ಕೂಟದ ಸಿಬ್ಬಂದಿ ಹಾಗೂ ಹಾಲು ಉತ್ಪಾದಕರು ಅಭಿನಂದನಾರ್ಹರು. ಉತ್ಪಾದಕರಿಂದ ಹಾಲು ಖರೀದಿ ದರವನ್ನು ಹೆಚ್ಚಿಸುವ ಹಾಗೂ ಮೇವಿನ ದರ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
  
  ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ. ಶ್ರೀಕಾಂತ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್‌, ಸಹಾಯಕ ವ್ಯವಸ್ಥಾಪಕ ನರಸಿಂಹಯ್ಯ ಗುಣಮಟ್ಟದ ಹಾಲು ಉತ್ಪಾದನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಹೊಸ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.
  ವಿಸ್ತರಣಾಧಿಕಾರಿಗಳಾದ ಗಣೇಶ್‌, ದೇವರಾಜ್‌, ನರಸಿಂಹರಾಜು, ಎಂ.ಜಿ.ಶ್ರೀನಿವಾಸ್‌, ಶ್ರೀನಿವಾಸಮೂರ್ತಿ ಇದ್ದರು.