ವಿಶ್ವದಲ್ಲೇ ಶ್ರೇಷ್ಠ ಹಾಗೂ ಬೃಹತ್ ಸಂವಿಧಾನ ಭಾರತ ಸಂವಿಧಾನ – ಹೆಚ್.ನಾಗೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ವಿಶ್ವದಲ್ಲೇ ಶ್ರೇಷ್ಠ ಹಾಗೂ ಬೃಹತ್ ಸಂವಿಧಾನ ಭಾರತ ಸಂವಿಧಾನ – ಹೆಚ್.ನಾಗೇಶ್

ಕೋಲಾರ: ಭಾರತ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಹಾಗೂ ಬೃಹತ್ ಸಂವಿಧಾನವಾಗಿದ್ದು, ಡಾ.ಬಿ.ಆರ್ ಅಂಬೇಡ್ಕರ್ ಅವರು ಇದರ ರಚನೆ ಮಾಡಿ ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ್ದಾರೆ  ಎಂದು ಅಬಕಾರಿ ಮತ್ತು ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಮತ್ತು ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಅಮೇರಿಕಾದಲ್ಲಿ 50 ರಾಜ್ಯಗಳಿಗೂ 50 ಸಂವಿಧಾನ ಹಾಗೂ ರಾಷ್ಟ್ರಕ್ಕೆ ಒಂದು ಸಂವಿಧಾನ ಸೇರಿ ಒಟ್ಟು 51 ಸಂವಿಧಾನಗಳಿವೆ ಆದರೆ ಭಾರತದಂತಹ ದೊಡ್ಡ ದೇಶಕ್ಕೆ ಒಂದೇ ಸಂವಿಧಾನವಿದೆ ಇಂತಹ ದೊಡ್ಡ ಸಂವಿಧಾನವನ್ನು ನೀಡಿದವರು ಡಾ.ಬಿ.ಆರ್ ಅಂಬೇಡ್ಕರ್ ಎಂದು ಸ್ಮರಿಸಿದರು.

 ಭಾರತದ ಸಂವಿಧಾನವನ್ನು ಎಲ್ಲಾ ದೇಶಗಳ ಸಂವಿಧಾನದ ಉತ್ತಮವಾದ ಅಂಶಗಳನ್ನು ತೆಗೆದುಕೊಂಡು ರಚನೆ ಮಾಡಿದ್ದಾರೆ. ನಮ್ಮ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ತುಂಬಾ ವಿರಳ. ಪ್ರತಿಯೊಂದು ಸಮುದಾಯಕ್ಕೊ ಸಮಾನ ನ್ಯಾಯವನ್ನು ಒದಗಿಸಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ರಚನೆಯಲ್ಲಿ ಸಿಂಹವಿದ್ದಂತೆ ಎಂದು ಶ್ಲಾಘಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್. ಮುನಿಸ್ವಾಮಿ ಅವರು ಮಾತನಾಡಿ ನಾವು ಯಾವುದೇ ದೇಶಕ್ಕೆ ಹೋದರು ಸಹ ನಮ್ಮ ಭಾರತದ ಸಂವಿಧಾನವನ್ನು ಕೊಂಡಾಡುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಿಸಿದ, ವಿದ್ಯಾಭ್ಯಾಸ ಮಾಡಿದ ಮುಂತಾದ ಕುರುಹುಗಳನ್ನು ಪಂಚತೀರ್ಥಗಳಾಗಿ ಭಾರತ ಸರ್ಕಾರವು ಅಭಿವೃದ್ದಿ ಪಡಿಸಿದೆ ಎಂದ ಅವರು ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸಂವಿಧಾನದ ಆಶಯಗಳಂತೆ ಸಹೋದರರಂತೆ ಬಾಳಬೇಕು ಎಂದು ತಿಳಿಸಿದರು.

 ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಪ್ರತಿನಿತ್ಯ ನಾವೆಲ್ಲರೂ ಅವರ ಜನ್ಮದಿನವನ್ನು ಆಚರಿಸಬೇಕೆಂದು ತಿಳಿಸಿದ ಅವರು ನಾವೆಲ್ಲಾ ಇಂದು ಅನುಭವಿಸುತ್ತಿರುವ ಆಡಳಿತ, ಅಧಿಕಾರ, ರಾಜಕಾರಣ ಎಲ್ಲವೂ ಅಂಬೇಡ್ಕರ್ ಅವರು ನೀಡಿರುವ ಬಿಕ್ಷೆ ಎಂದ ಅವರು ಸಂವಿಧಾನ ರಚನಾ ಸಮಿತಿಯಲ್ಲಿ ಹಲವು ಗಣ್ಯರಿದ್ದರೂ ಸಹ ಸಂವಿಧಾನ ರಚನೆಯನ್ನು ಅಂತಿಮಗೊಳಿಸಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ತಿಳಿಸಿದರು.

 ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ಮಾತನಾಡಿ ಅಂಬೇಡ್ಕರ್ ಅವರು ಸ್ವತಂತ್ರ್ಯ ಪೂರ್ವದಲ್ಲೆ ಸಂವಿಧಾನವನ್ನು ರಚನೆಯನ್ನು ಪ್ರಾರಂಭಿಸಿದರು. ಈ ಸಂವಿಧಾನವನ್ನು ವಿಶ್ವವೇ ಒಪ್ಪಿಕೊಳ್ಳುವಂತದ್ದು, ಅ ಸಂದರ್ಭದಲ್ಲಿ ಎಲ್ಲಾ ಸಮುದಾಯಕ್ಕೂ ನ್ಯಾಯ ಒದಗಿಸುವಂತಹ ಸಂವಿಧಾನವನ್ನು ರಚನೆ ಮಾಡುವುದು ಸುಲಭದ ವಿಚಾರವಾಗಿರಲಿಲ್ಲ ಆದರೂ ಸಹ ಸಂವಿಧಾನವನ್ನು ರಚಿಸಿದಂತಹ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯು ನೆನೆಯಬೇಕು ಎಂದು ತಿಳಿಸಿದರು.

 ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಮಾತನಾಡಿ ಸಂವಿಧಾನವು ದೇಶದ ಪ್ರಗತಿಗೆ ಮೂಲಕಾರಣ.  ಈ ಸಂವಿಧಾನವನ್ನು ರಚಿಸಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅವರ ಅಧ್ಯಕ್ಷತೆಯ ಸಮಿತಿಯು ಎರಡು ವರ್ಷ 11 ತಿಂಗಳು 17 ದಿನಗಳನ್ನು ತೆಗೆದುಕೊಂಡಿತು. 1946 ರಿಂದ ನವೆಂಬರ್ 26, 1949 ರ ವರೆಗೆ ಅಧಿಕೃವಾಗಿ ಚರ್ಚೆಗಳಾಗುತ್ತಿದ್ದವು. ಸಂವಿಧಾನದ ಒಂದೂಂದು ಅಂಶದ ಬಗ್ಗೆ ಯಾರೇ ಟೀಕೆ ಟಿಪ್ಪಣಿ ಮಾಡಿದರು ಸಹ  ಅದಕ್ಕೆ ಸಮಂಜಸವಾಗಿ ಉತ್ತರಿಸುತ್ತಿದ್ದರು ಎಂದು ತಿಳಿಸಿದರು 

ದೇಶಕ್ಕೆಲ್ಲಾ ಒಂದೇ ಸಂವಿಧಾನವನ್ನು ಅಳವಡಿಸಿಕೊಂಡಿರುವ ಜಾತ್ಯಾತೀತ ರಾಷ್ಟ್ರ ಭಾರತ.  ಅಮೇರಿಕಾದಂತಹ ಮುಂದುವರೆದ ದೇಶದಲ್ಲಿ ಮತದಾನದ ಹಕ್ಕು ಸಂವಿಧಾನ ರಚನೆಯಾದ 300 ದಿನಗಳವರೆಗೆ ಮಹಿಳೆಯರಿಗೆ ನೀಡಿರಲಿಲ್ಲ.  ಆದರೆ ಭಾರತದಲ್ಲಿ ಸಂವಿಧಾನ ಜಾರಿಯಾದಾಗಿನಿಂದಲೂ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತ ಚಲಾಯಿಸುವ ಹಕ್ಕನ್ನು ನಮ್ಮ ಸಂವಿಧಾನ ನೀಡಿತು ಎಂದ ಅವರು ಸಂವಿಧಾನದÀ  ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇೀಶದಿಂದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದೇವೆ  ಎಂದು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಉಪನ್ಯಾಸಕರಾದ ಶಂಕರಪ್ಪ ಅವರು ಉಪನ್ಯಾಸ ನೀಡಿ ಸಂವಿಧಾನವು ಭಾರತದ ಒಂದು ಧರ್ಮಗ್ರಂಥ. ಭಾರತ ಸಂವಿಧಾನದಲ್ಲಿ 4 ಆಧಾರ ಸ್ಥಂಭಗಳಿವೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ. 1885 ರ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಜನರಲ್ಲಿ ಉತ್ತಮ ಪ್ರಜ್ಞೆಯನ್ನು ರೂಪಿಸಿತು. ನಮ್ಮ ಭಾರತ ದೇಶದಲ್ಲಿ ಹಲವಾರು ಜಾತಿಗಳಿದ್ದರೂ ಸಮಾನತೆಯಿಂದ ಸೋದರ ಭಾವನೆಯಿಂದ ಬಾಳುತ್ತಿದ್ದೇವೆ. ಒಂದು ದೇಶ ಒಂದು ಸಂವಿಧಾನ ಇದು ಕೇವಲ ಸರ್ಕಾರಿ ಕಾರ್ಯಕ್ರಮ ಆಗಬಾರದು. ಸಂವಿಧಾನವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದೆ ಎಂದು ತಿಳಿಸಿದರು. 

ಕಾರ್ಯಕ್ರಮಕ್ಕೂ ಮುಂಚೆ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಸಚಿವರು ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು. ನಂತರ ಬಂಗಾರಪೇಟೆ ವೃತ್ತದಿಂದ ಟಿ.ಚನ್ನಯ್ಯ ರಂಗಮಂದಿರದವರೆಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಮುನಿಸ್ವಾಮಿ, ಜಗನ್ನಾಥನ್ ಹೆಚ್, ರಾಜನ್ನ, ಜನಾರ್ಧನ್, ಡೇವಿಡ್, ನಾರಾಯಣಪ್ಪ, ಗೋಪಾಲ್, ಅಶೋಕ್ ಕೆ, ನಾರಾಯಣ್, ಕೃಷ್ಣಮೂರ್ತಿ ಇವರಿಗೆ ಸನ್ಮಾನಿಸಲಾಯಿತು. 

 ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಹೆಚ್.ವಿ ದರ್ಶನ್, ಅಪರ ಜಿಲ್ಲಾಧಿಕಾರಿಗಳಾದ ಹೆಚ್ ಪುಷ್ಪಲತಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ತಹಶಿಲ್ದಾರರಾದ ಶೋಭಿತಾ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಸೂಲೂರು ಎಂ. ಆಂಜಿನಪ್ಪ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ.ಟಿ.ಡಿ. ಕೆಂಪರಾಜು, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕಾರ್ಯದರ್ಶಿ ಮತ್ತು ಕುಲ ಸಚಿವರಾದ ಪ್ರೊ. ಕೆ. ಜನಾರ್ಧನ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.