ಸಾಲ ಎಂದೂ ಆಸ್ತಿಯಾಗದು-ಮರುಪಾವತಿಸಿ ಗೌರವ ಉಳಿಸಿಕೊಳ್ಳಿ :ಆಸ್ತಿಜಪ್ತಿ ಖಚಿತ-ಪ್ರಭಾವಕ್ಕೆ ಒಳಗಾಗಲ್ಲ-ಬ್ಯಾಲಹಳ್ಳಿಗೋವಿಂದಗೌಡ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಸಾಲ ಎಂದೂ ಆಸ್ತಿಯಾಗದು-ಮರುಪಾವತಿಸಿ ಗೌರವ ಉಳಿಸಿಕೊಳ್ಳಿ :ಆಸ್ತಿಜಪ್ತಿ ಖಚಿತ-ಪ್ರಭಾವಕ್ಕೆ ಒಳಗಾಗಲ್ಲ-ಬ್ಯಾಲಹಳ್ಳಿಗೋವಿಂದಗೌಡ

ಕೋಲಾರ:- ಸಾಲ ಎಂದಿಗೂ ಆಸ್ತಿಯಾಗದು, ಮೊದಲು ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳಿ, ಇಲ್ಲವಾದಲ್ಲಿ ನಿಮ್ಮ ಆಸ್ತಿಗಳ ಜಪ್ತಿಗೆ ಈಗಾಗಲೇ ಅಂತಿಮ ನೋಟೀಸ್ ನೀಡಲಾಗಿದ್ದು, ಶಿಫಾರಸ್ಸು,ಪ್ರಭಾವಗಳಿಗೆ ಒಳಗಾಗದೇ ಹರಾಜು ಹಾಕಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಸಾಲ ಬಾಕಿ ಉಳಿಸಿಕೊಂಡಿರುವವರ ನಿವಾಸಗಳಿಗೆ ಅಂತಿಮ ನೋಟೀಸ್ ಅಂಟಿಸಿ ಅವರು ಮಾತನಾಡಿ ಸಾಲ ಎಂದಿಗೂ ಆಸ್ತಿಯಾಗದು, ಮರುಪಾವತಿಸಿದರೆ ಮಾತ್ರ ಅದು ನಿಮ್ಮ ಆಸ್ತಿ ಎಂದರು.


ಅವಿಭಜಿತ ಜಿಲ್ಲೆಯಲ್ಲಿ ಒಟ್ಟು 243 ಮಂದಿಗೆ ಮನೆ ನಿರ್ಮಾಣಕ್ಕಾಗಿ ಸುಮಾರು 36.75 ಕೋಟಿ ರೂ ಸಾಲ ನೀಡಲಾಗಿದೆ, ಇದರಲ್ಲಿ ಸುಮಾರು 100 ಮಂದಿ ಸಾಲದ ಕಂತು ಮರುಪಾವತಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ, ಬ್ಯಾಂಕ್ ಸಿಬ್ಬಂದಿ ಪದೇ ಪದೇ ಅವರ ಮನೆಗಳಿಗೆ ಅಲೆದು ಒತ್ತಡ ಹಾಕಿದರೂ ಲೆಕ್ಕಿಸದೇ ಸಾಲ ಬಾಕಿ ಉಳಿಸಿಕೊಂಡಿದ್ದಾರೆ ಎಂದರು.
ಈಗಾಗಲೇ ಇಂತಹವರಿಗೆ ಸ್ಥಿರ ಸ್ವತ್ತುಗಳನ್ನು ಜಪ್ತಿ ಮಾಡಲು ಸರ್‍ಫೈಸಿ ಆಕ್ಟ್-2002ರ ಅನ್ವಯ ಮುಂಚಿತವಾಗಿ ನೀಡುವ ತಗಾದೇ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಸಾಲದ ಕಂತು ಮರುಪಾವತಿಸದವರ ವಸತಿ,ವಾಣಿಜ್ಯ ಆಸ್ತಿಗಳ ಜಪ್ತಿಗೆ ಈಗಾಗಲೇ ವಕೀಲರ ಮೂಲಕ ಲೀಗಲ್ ನೋಟೀಸ್ ಜಾರಿ ಮಾಡಲಾಗಿದೆ. ಇದು ಅಂತಿಮ ಎಚ್ಚರಿಕೆಯಾಗಿದ್ದು, ಸಾಲದಕಂತು ಪಾವತಿಸದಿದ್ದಲ್ಲಿ ಮುಲಾಜಿಲ್ಲದೇ ಆಸ್ತಿಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆಯುವುದಾಗಿ ನುಡಿದರು.
ಬಡ ಹೆಣ್ಣು ಮಕ್ಕಳಿಗೆ ಬ್ಯಾಂಕ್ 800 ಕೋಟಿಗೂ ಅಧಿಕ ಸಾಲ ನೀಡಿದೆ, ಅವರು ಗೌರವದಿಂದ ಸಾಲ ಮರುಪಾವತಿ ಮಾಡಿ ಬ್ಯಾಂಕ್ ಉಳಿಸಿದ್ದಾರೆ, ಆದರೆ ಉಳ್ಳವರಿಗೆ ಮನೆಕಟ್ಟಲು ನೀಡಿರುವ ಸಾಲ ಮರುಪಾವತಿ ವಿಳಂಬವಾಗಿದೆ ಎಂದು ವಿಷಾದಿಸಿದರು.
ಮಹಿಳಾ ಸಂಘಗಳಿಗೆ ನೀಡುತ್ತಿರುವ ಸಾಲವನ್ನು ಬಡವರು ಗೌರವದಿಂದ ಬ್ಯಾಂಕಿಗೆ ಬಂದು ಮರುಪಾವತಿ ಮಾಡುತ್ತಿದ್ದಾರೆ, ಜತೆ ಬಡವರೇ ಡಿಸಿಸಿ ಬ್ಯಾಂಕನ್ನು ನಂಬಿ ಕೈಲಾದಷ್ಟು ಠೇವಣಿಯೂ ಇಟ್ಟಿದ್ದಾರೆ, ಆದರೆ ಉಳ್ಳವರು ಸಾಲಕ್ಕಾಗಿ ಡಿಸಿಸಿ ಬ್ಯಾಂಕಿಗೆ ಬರುತ್ತಾರೆ, ಠೇವಣಿ ಇಡಲು ವಾಣಿಜ್ಯ ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು.
ವಿಶೇಷವೆಂದರೆ ಸಾಲ ಬಾಕಿ ಉಳಿಸಿಕೊಂಡಿರುವವರು ನಗರದಲ್ಲಿ ಆಸ್ತಿ ಹೊಂದಿರುವವರೇ ಆಗಿರುವುದರ ಜತೆಗೆ ಇವರಿಗೆ ಹೆಚ್ಚು ಸರ್ಕಾರಿ ನೌಕರರೇ ಭಧ್ರತೆ ಶ್ಯೂರಿಟಿ ಹಾಕಿದ್ದಾರೆ, ಅವರಿಗೂ ನೋಟೀಸ್ ನೀಡಲಾಗಿದೆ, ಈಗಲೂ ಬ್ಯಾಂಕಿಗೆ ಬಂದು ಸಾಲದ ಬಾಕಿ ಕಂತುಗಳನ್ನು ಮರುಪಾವತಿಸದಿದ್ದಲ್ಲಿ ಆಸ್ತಿಗಳ ಜಪ್ತಿ ಖಚಿತ ಎಂದು ತಿಳಿಸಿದರು.
ಆಸ್ತಿ,ಮನೆ ಜಪ್ತಿಯಿಂದ ಮಾನಸಿಕ ಹಿಂಸೆಗೆ ಗುರಿಯಾಗುತ್ತೀರಿ, ಕೂಡಲೇ ಸಾಲದಕಂತುಗಳನ್ನು ಪಾವತಿಸಿ ಗೌರವ ಉಳಿಸಿಕೊಳ್ಳಿ, ಸಾಲ ಮರುಪಾವತಿಸದೇ ಮೊಂಡುತನ ತೋರುವ ನಿಮ್ಮ ಧೋರಣೆ ಬದಲಿಸಿಕೊಳ್ಳಿ ಎಂದು ಸಾಲ ಪಡೆದವರಿಗೆ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಕೆಲವು ಬಡಾವಣೆಗಳಲ್ಲಿ ಸಾಲ ಪಡೆದವರು ನೊಟೀಸ್ ಅಂಟಿಸಬೇಡಿ, ನಾಳೆಯೇ ಬಂದು ಸಾಲದ ಕಂತು ಮರುಪಾವತಿಸುವುದಾಗಿ ಕೋರಿಕೊಂಡ ಪ್ರಸಂಗವೂ ನಡೆಯಿತು.ಆದರೆ ನಿಯಮಾನುಸಾರ ಬ್ಯಾಂಕ್ ಸಿಬ್ಬಂದಿ ನೋಟೀಸ್ ಅಂಟಿಸಿ ಹೊರನಡೆದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಎಜಿಎಂ ನಾಗೇಶ್, ಸೂಪರ್ ವೈಸರ್ ಅಮಿನಾ ಮತ್ತು ಸಿಬ್ಬಂದಿ ಹಾಜರಿದ್ದರು.