ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿದರು.
ಶ್ರೀನಿವಾಸಪುರ: ಇಲ್ಲಿನ ಕೆಲವು ಸರ್ಕಾರಿ ಕಚೇರಿಗಳನ್ನು ನೂತನ ರಸ್ತೆ ಸಾರಿಗೆ ಸಂಸ್ಥೆ ಸಮೀಪದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.
 ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿರುವ ಕಟ್ಟವನ್ನು ಪರಿಶೀಲಿಸಿದ ಬಳಿಕ, ಅದೇ ಕಟ್ಟಡದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೆಲವು ಇಲಾಖೆಗಳನ್ನು ಒಂದೇ ಕಚೇರಿಗೆ ಸ್ಥಳಾಂತರ ಮಾಡುವುದರಿಂದ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಸುತ್ತಾಡುವ ಅಗತ್ಯ ಇರುವುದಿಲ್ಲ. ಬಸ್‌ ನಿಲ್ದಾಣದ ಪಕ್ಕದಲ್ಲಿಯೇ ಕಚೇರಿಗಳು ಇರುವುದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
  ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಬಕಾರಿ, ರೇಷ್ಮೆ, ಅಕ್ಷರ ದಾಸೋಹ, ಹಾಗೂ ಸಿಡಿಪಿಒ ಕಚೇರಿಗಳನ್ನು ನವೆಂಬರ್‌ 1 ಕ್ಕೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
  ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಚಂದ್ರ, ಸ್ಥಳೀಯ ಘಟಕದ ವ್ಯವಸ್ಥಾಪಕ ಕೆ.ಮಂಜುನಾಥ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅಪ್ಪಿರೆಡ್ಡಿ, ಎಂಜಿನಿಯರ್‌ ಗುರುಪ್ರಸಾದ್‌, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್‌ ಮತ್ತಿತರರು ಇದ್ದರು.
  ಸ್ಥಳ ಪರಿಶೀಲನೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು, ಪಟ್ಟಣದ ಹೊರ ವಲಯದ ಕಲ್ಲೂರು ಗ್ರಾಮದ ಸಮೀಪ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.