ಭಾರತ ದೇಶವನ್ನು 2025 ರೊಳಗಾಗಿ ಕುಷ್ಠರೋಗ ಮುಕ್ತವಾಗಲು ಪಣ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಭಾರತ ದೇಶವನ್ನು 2025 ರೊಳಗಾಗಿ ಕುಷ್ಠರೋಗ ಮುಕ್ತವಾಗಲು ಪಣ
ಜಿಲ್ಲೆಯಲ್ಲಿ ಸೆ.5 ರಿಂದ 23 ರವರೆಗೆ ಕುಷ್ಠರೋಗ ಪತ್ತೆ ಆಂದೋಲನ : ಡಾ.ವಿಜಯ ಕುಮಾರ್ 
ಕೋಲಾರ: ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರವು 2025 ರೊಳಗಾಗಿ ಭಾರತವನ್ನು ಕುಷ್ಠ ರೋಗ ಮುಕ್ತ ದೇಶವಾಗಿಸಲು ಪಣತೊಟ್ಟಿದ್ದು, ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚುವ ಅಭಿಯಾನವನ್ನು ಸೆ.5 ರಿಂದ 23 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ. ವಿಜಯಕುಮಾರ್ ಅವರು ತಿಳಿಸಿದರು. 
 ನಗರ ಹೊರವಲಯದಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಷ್ಠ ರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲು ಈ ಅಭಿಯಾನವನ್ನು ನಡೆಸುತ್ತಿದ್ದು ಪ್ರತಿಯೊಂದು ಮನೆಗೂ ಭೇಟಿ ನೀಡಿ ಕುಷ್ಠ ರೋಗ ಪ್ರಕರಣಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು. 
 ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಆಂದೋಲನದ ಅವಧಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಪರೀಕ್ಷಿಸಲಿದ್ದು ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕುಷ್ಠ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದರು. 
  ಜಿಲ್ಲೆಯಲ್ಲಿ 54 ಕುಷ್ಠ ರೋಗ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ 46 ಪ್ರಕರಣಗಳಲ್ಲಿ ಹೆಚ್ಚು ಮಚ್ಚೆಗಳು ಕಾಣಿಸಿಕೊಂಡಿದ್ದರೆ 8 ಪ್ರಕರಣಗಳು ಪ್ರಾರಂಭದ ಹಂತದಲ್ಲಿಯೇ ಕಂಡು ಬಂದಿದೆ. ಇವರುಗಳಿಗೆ ಈಗಾಗಲೇ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅದರಲ್ಲೂ ಶ್ರೀನಿವಾಸಪುರ ಮತ್ತು ಮುಳಬಾಗಿಲು ತಾಲ್ಲೂಕುಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಗಡಿ ಭಾಗಗಳಲ್ಲಿಯೂ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು. 
 ಕುಷ್ಠ ರೋಗವು ಮೈಕೋ ಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದೊಂದು ಗುಣವಾಗುವ ಕಾಯಿಲೆಯಾಗಿದ್ದು ಇದಕ್ಕೆ ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಈ ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮಾರಕವಾಗದಿದ್ದರೂ ರೋಗಿಯು ಅಂಗಾಂಗಗಳನ್ನು ಕಳೆದುಕೊಳ್ಳುವ ಸಾಧÀ್ಯತೆ ಇರುತ್ತದೆ ಎಂದು ವಿವರಿಸಿದರು. 
 ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿಯಾದ ನಾರಾಯಣಸ್ವಾಮಿ ಅವರು ಮಾತನಾಡಿ, ಕುಷ್ಠ ರೋಗವು ಕೇವಲ ಮನುಷ್ಯನಿಗೆ ಬರುವ ಕಾಯಿಲೆಯಾಗಿದೆ. ಚರ್ಮದ ಮೇಲೆ ತಿಳಿ ಬಿಳಿ, ತಾಮ್ರ ಬಣ್ಣದ ಮಚ್ಚೆಗಳು, ಸ್ಪರ್ಶ ಜ್ಞಾನ ಇಲ್ಲದಿರುವುದು, ನರಗಳ ಊತ, ಮಚ್ಚೆಗಳ ಮೇಲೆ ಕೂದಲು ಬೆಳೆಯದಿರುವುದು, ಮಾಂಸ ಖಂಡಗಳ ನಿಷ್ಕ್ರಿಯತೆ, ಮೂಗು ಚಪ್ಪಟೆಯಾಗುವುದು, ಕಣ್ಣು ಮುಚ್ಚಲು ಆಗದಿರುವುದು, ಮಚ್ಚೆಗಳಲ್ಲಿ ನವೆ ಇಲ್ಲದಿರುವುದು ಮತ್ತು ಬೆವರು ಬರದಿರುವುದು ಈ ರೋಗದ ಲಕ್ಷಣಗಳಾಗಿವೆ ಎಂದರು. 
 ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಉಚಿತವಾಗಿ ಚಿಕಿತ್ಸೆ ನೀಡುವ ಆಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿ ಜಿಲ್ಲೆಯಾಧ್ಯಂತ 1230 ತಂಡಗಳನ್ನು ಮಾಡಲಾಗಿದೆ. ಪ್ರತಿಯೊಂದು ತಂಡದಲ್ಲಿ ಒಬ್ಬ ಪುರುಷ ಮತ್ತು ಮಹಿಳಾ ಸಿಬ್ಬಂದಿ ಇರುತ್ತಾರೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಇಲಾಖೆಯವರನ್ನು ತೊಡಗಿಸಿಕೊಳ್ಳಲಾಗಿದೆ. ಇವರುಗಳ ಕಾರ್ಯವೈಖರಿಯನ್ನು ಗಮನಿಸಲು 240 ಮೇಲ್ವಿಚಾರಕರ ತಂಡವನ್ನು ರಚಿಸಲಾಗಿದೆ. ಈ ಎಲ್ಲರಿಗೂ ಸಹ ಈಗಾಗಲೇ ತರಬೇತಿಯನ್ನೂ ಸಹ ನೀಡಲಾಗಿದೆ ಎಂದು ವಿವರಿಸಿದರು. 
  ಇದೇ ಸಂದರ್ಭದಲ್ಲಿ ಕುಷ್ಠರೋಗ ಪತ್ತೆ ಅಭಿಯಾನದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. 
 ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಚಂದನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಪ್ರಸನ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.