ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಪಿಂಚಣಿದಾರರ ಅನುಕೂಲಕ್ಕಾಗಿ ಬ್ಯಾಂಕ್ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆಯಿರಿ -ಜೆ. ಮಂಜುನಾಥ್
ಕೋಲಾರ: ಪಿಂಚಣಿದಾರರಿಗೆ ಬ್ಯಾಂಕ್ಗಳಲ್ಲಿ ಪ್ರತ್ಯೇಕ ಕೌಂಟರ್ಗಳನ್ನು ತೆರೆದು ಅಲ್ಲಿ ಉತ್ತಮವಾಗಿ ಹಿರಿಯರೊಂದಿಗೆ ಸ್ಪಂದಿಸುವ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ನಿವೃತ್ತ ನೌಕರರ ಪಿಂಚಣಿ ಅದಾಲತ್ ಆಂದೋಲನದ ಅಧ್ಯಕ್ಷತೆ ವಹಿಸಿದ್ದ ಅವರು, ಪಿಂಚಣಿದಾರರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಬ್ಯಾಂಕ್ಗಳಿಗೆ ಬರುವ ಹಿರಿಯ ನಾಗರೀಕರು ಮತ್ತು ನಿವೃತ್ತಿ ನೌಕರರಿಗೆ ಸೂಕ್ತವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಬಂದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
ಹಿರಿಯ ನಾಗರೀಕರಿಗೆ ಪಿಂಚಣಿಯನ್ನು ತಿಂಗಳ ಕೊನೆಯ 2-3 ದಿನಗಳಲ್ಲಿ ಮಾತ್ರ ನೀಡುತ್ತಾರೆ. ಹಾಗಾಗಿ ಹೆಚ್ಚು ಮಂದಿ ಬ್ಯಾಂಕ್ಗಳಿಗೆ ಬರುವುದರಿಂದ ಅಂದಿನ ದಿನ ಸಾಲಿನಲ್ಲಿ ಕಾದು ಕೂರಬೇಕಾದ ಸಮಸ್ಯೆ ಇದೆ. ಹಾಗಾಗಿ ಪಿಂಚಣಿ ಹಣವನ್ನು ಒಂದು ವಾರ ಕಾಲ ನೀಡಲು ಕ್ರಮವಹಿಸಬೇಕು. ಅಷ್ಟೇ ಅಲ್ಲದೆ ಹಿರಿಯ ನಾಗರೀಕರೊಂದಿಗೆ ಸಿಬ್ಬಂದಿಯವರು ಸೌಜನ್ಯದಿಂದ ವರ್ತಿಸಬೇಕು. ಈ ಕುರಿತು ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚನೆ ನೀಡಿ ಎಂದು ಹೇಳಿದರು.
ಕೆಲವು ಹಿರಿಯರಿಗೆ ತಂತ್ರಜ್ಞಾನದ ಬಳಕೆಯ ಬಗ್ಗೆ ಸೂಕ್ತ ಅರಿವು ಇರುವುದಿಲ್ಲ. ಹಾಗಾಗಿ ಸಿಬ್ಬಂದಿಯವರು ಇವರಿಗೆ ತಂತ್ರಜ್ಞಾನದ ಬಳಕೆಯ ಬಗ್ಗೆ ಸಲಹೆಗಳನ್ನು ನೀಡಬೇಕು. ಜೊತೆಗೆ ತಂತ್ರಜ್ಞಾನ ರಹಿತವಾಗಿಯೂ ಬ್ಯಾಂಕ್ಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಅದನ್ನು ಬಿಟ್ಟು ಮನ ಬಂದಂತೆ ಹಿರಿಯ ನಾಗರೀಕರೊಂದಿಗೆ ವರ್ತಿಸುವುದು, ಸುಮ್ಮನೆ ಅಲೆದಾಡಿಸುವುದನ್ನು ಮಾಡಬಾರದು ಎಂದು ಸೂಚನೆ ನೀಡಿದರು.
ಪಿಂಚಣಿ ಹಣವನ್ನು ಈ ಹಿಂದೆ ಸುಮಾರು 18 ಬ್ಯಾಂಕ್ಗಳಿಂದ ನೀಡಲಾಗುತ್ತಿತ್ತು. ಆದರೆ ಇದೀಗ ಸರ್ಕಾರದ ಆದೇಶದಂತೆ 5 ಬ್ಯಾಂಕ್ಗಳಿಂದ ಮಾತ್ರ ಅಂದರೆ ಎಸ್.ಬಿ.ಐ, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್ ಮೂಲಕ ಮಾತ್ರ ನೀಡಲಾಗುತ್ತದೆ. ಇದನ್ನು ಹೊರತು ಪಡಿಸಿ ಬೇರೆ ಬ್ಯಾಂಕ್ಗಳ ಮೂಲಕ ಪಿಂಚಣಿ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬ್ಯಾಂಕ್ಗಳ ಬಳಿ ಎಟಿಎಂ, ಡೆಪಾಸಿಟ್ ಮತ್ತು ಪಾಸ್ ಬುಕ್ ಎಂಟ್ರಿ ಪುಸ್ತಕಗಳ ಮಿಷನರಿಗಳು ಯಾವಾಗಲು ಕೆಟ್ಟು ಬಿದ್ದಿರುತ್ತವೆ ಎಂಬ ದೂರುಗಳು ಕೇಳಿ ಬಂದಿದ್ದು ಇವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದ ಅವರು, ಜಿಲ್ಲೆಯಲ್ಲಿ ಮೊದಲ ಬಾರಿಗೆ ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿ ಅದಾಲತ್ ಆಂದೋಲನವನ್ನು ಹಮ್ಮಿಕೊಂಡಿದ್ದು ಇದನ್ನು ತಾಲ್ಲೂಕು ಮಟ್ಟದಲ್ಲಿಯೂ ಮಾಡಿ ಇವರ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಬೇಕೆಂದರು.
ಇದೇ ಸಂದರ್ಭದಲ್ಲಿ ನಿವೃತ್ತ ನೌಕರರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು. ಅಷ್ಟೇ ಅಲ್ಲದೆ ತಮ್ಮ ಸಮಸ್ಯೆಗಳನ್ನು ಕುರಿತು ಮನವಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕೋಲಾರ ತಾಲ್ಲೂಕು ತಹಶೀಲ್ದಾರ್ರಾದ ನಾಗವೇಣಿ, ನಿವೃತ್ತ ನೌಕರರ ಸಂಘದ ಜಯರಾಮರೆಡ್ಡಿ, ಪೆರಮಾಳ್, ನಂಜುಂಡಪ್ಪ, ಶ್ರೀನಿವಾಸ್, ಎಂ.ಆರ್.ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.