ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ – ಎನ್. ಕೃಷ್ಣಮೂರ್ತಿ
ಕೋಲಾರ : 3 ದಿನಗಳ ಕಾಲ ಜಿಲ್ಲೆಯ ಅಂಗನವಾಡಿ, ಶಾಲೆ, ನ್ಯಾಯಬೆಲೆ ಅಂಗಡಿಗಳು, ಗೋಡನ್ಗಳು ಹಾಗೂ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಾಗಿದ್ದು, ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಎನ್. ಕೃಷ್ಣಮೂರ್ತಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಹಾರ ಆಯೋಗವು 2017 ಜುಲೈ 5 ರಂದು ಅಸ್ತಿತ್ವಕ್ಕೆ ಬಂದಿದ್ದು, 5 ಜನ ಸದಸ್ಯರನ್ನು ಒಳಗೊಂಡಿದೆ. ಇದರವರೆಗೂ 19 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲೆಗಳ ಆಹಾರ ಸುರಕ್ಷತೆ, ಸರಬರಾಜು ಹಾಗೂ ಆಹಾರ ಭದ್ರತೆ ಬಗ್ಗೆ ಪರಿಶೀಲಿಸಿದೆ. ಆಯೋಗವು ಜಾರಿಗೆ ಬಂದ ನಂತರ ಗೋಡನ್ಗಳಲ್ಲಿ ಕೊಳೆಯುತ್ತಿದ್ದ ಕೋಟಿಗಟ್ಟಲೆ ಆಹಾರ ಪದಾರ್ಥಗಳನ್ನು ಸಂರಕ್ಷಿಸಿ, ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಸರ್ಕಾರವು ಜಾರಿಗೆ ತಂದಿರುವ ಬಿಸಿ ಊಟ ಯೋಜನೆ, ಹಾಸ್ಟೆಲ್ಗಳ ಸೌಲಭ್ಯ, ಅಂಗವಾಡಿಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಗರ್ಭಿಣಿ ಮತ್ತು ತಾಯಂದಿರಿಗೆ ನೀಡುವ ಪೌಷ್ಟಿಕ ಆಹಾರ, ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಅನ್ನಭಾಗ್ಯ ಯೋಜನೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ ಎಂದರು.
ಅಪೌಷ್ಟಿಕ ಮಕ್ಕಳನ್ನು (ಸ್ಯಾಮ್ ಚಿಲ್ಡ್ರನ್ಸ್) ಪೋಷಿಸಲು ಪ್ರತಿ ಜಿಲ್ಲೆಗೆ 10 ಬೆಡ್ಗಳ ಆಸ್ಪತ್ರೆ ಕಲ್ಪಿಸಲಾಗಿದ್ದು, ತಾಯಿ ಮತ್ತು ಮಗುವಿನ ಪೋಷಣೆಗೆ ತಲಾ 125 ರೂ. ಹಾಗೂ ಮಗುವಿನ ಔಷಧಿ ಖರ್ಚಿಗೆ 125 ರೂಗಳನ್ನು ನೀಡಿ 14 ದಿನಗಳು ಪೋಷಣೆ ಮಾಡಿ ಮಕ್ಕಳ ತೂಕವನ್ನು ಹೆಚ್ಚಿಸಲಾಗುತ್ತದೆ. ಈ ಯೋಜನೆಯು ಜಿಲ್ಲೆಯ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಆಯೋಗದ ಸದಸ್ಯರಾದ ಹೆಚ್.ಬಿ ಶಿವಶಂಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ 6 ಅಂಗನವಾಡಿಗಳು, 4 ಮಧ್ಯಾಹ್ನ ಬಿಸಿಯೂಟ ಶಾಲೆಗಳು ಹಲವಾರು ಹಾಸ್ಟೆಲ್ಗಳು, ಗೋಡನ್ಗಳಿಗೆ ಭೇಟಿ ನೀಡಿ ಲೋಪದೋಷಗಳನ್ನು ವರದಿ ಮಾಡಲಾಗಿದೆ. ಕೋಲಾರ ತಾಲ್ಲೂಕಿನ ಗದ್ದೆಕಣ್ಣೂರು ಗ್ರಾಮದಲ್ಲಿ 2 ಅಂಗನವಾಡಿಗಳಿದ್ದು, ಇದರಲ್ಲಿ ಒಂದು ಅಂಗನವಾಡಿಯನ್ನು ಸ್ಥಳೀಯ ಮುಖಂಡರು ಕೇವಲ ಪರಿಶಿಷ್ಟ ಜಾತಿಯ ಮಕ್ಕಳಿಗೆ ಮೀಸಲಿಟ್ಟಿರುವುದು ಕಾನೂನು ಬಾಹಿರ. ಇಲ್ಲಿ ಕೇವಲ ಪರಿಶಿಷ್ಟ ಜಾತಿಯ ಮಕ್ಕಳು ದಾಖಲಾಗಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿದ್ದು, ಇಂದು ಸಂಜೆಯೊಳಗೆ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ವರದಿ ತರಿಸಿಕೊಂಡು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಆಯೋಗದ ಸದಸ್ಯರಾದ ಬಿ.ಬಿ. ಹಸಬಿ ಅವರು ಮಾತನಾಡಿ, 3 ದಿನಗಳಲ್ಲಿ 8 ರಿಂದ 10 ನ್ಯಾಯಬೆಲೆ ಅಂಗಡಿಗಳಿಗೆ, 3 ಹಾಸ್ಟೆಲ್ಗಳಿಗೆ ಭೇಟಿ ನೀಡಲಾಗಿದೆ. ಶ್ರೀನಿವಾಸಪುರದ ಬಾಲಕರ ಹಾಸ್ಟೆಲ್ನ ಸ್ಥಿತಿಯು ಹದಗೆಟ್ಟಿದ್ದು, ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಪಕ್ಕದಲ್ಲೇ ಕೆರೆ ಇರುವುದರಿಂದ ಸೊಳ್ಳೆಗಳು ಹೆಚ್ಚಿವೆ. ಜಿಲ್ಲೆಯಲ್ಲಿ ಹಾಸ್ಟೆಲ್ಗಳಿಗೆ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಮಂಜುಳಾಬಾಯಿ, ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್, ಆಹಾರ ಇಲಾಖೆಯ ಉಪನಿರ್ದೇಶಕರಾದ ನಾಗರಾಜಯ್ಯ ಕೆಳಗಿನಮನಿ ಅವರು ಉಪಸ್ಥಿತರಿದ್ದರು.