JANANUDI.COM NETWORK
ಕುಂದಾಪುರದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ- ಮಳೆಯಿಂದ ಅಡಚಣೆ -ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್
ಕುಂದಾಪುರ, ಆ.15: ಕುಂದಾಪುರದ ಗಾಂಧೀ ಮೈದಾನದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಳೆಯ ನಡುವೆ ಸರಳವಾಗಿ ಗುರುವಾರದಂದು ಆಚರಿಸಲಾಯಿತು.
.ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಡಾ. ಮಧುಕೇಶ್ವರ್ ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ, “ಕೇಸರಿ ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ನೋಡಲು ಹೆಮ್ಮೆ. ಆದರೆ ಇದನ್ನು ಪಡೆಯಲು ಹಲವರ ತ್ಯಾಗ ಬಲಿದಾನವಿದೆ. ಬ್ರಿಟೀಷರ ದಾಸ್ಯದಿಂದ ಹೊರತಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಹಲವು ಮಹಾನ್ ನಾಯಕರ ತ್ಯಾಗವನ್ನು ಸ್ಮರಿಸಿ ನಾವು ಅವರು ಹಾಕಿಕೊಟ್ಟ ಉತ್ತಮ ಪಥದಲ್ಲಿ ನಾವು ಸಾಗಬೇಕು. ನಮಗೆ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಬ್ದಾರಿ ಮತ್ತು ಕರ್ತವ್ಯ ಆಗಿದೆ. ದೇಶದ ಸಮಗ್ರತೆ, ಭದ್ರತೆ, ಏಕತೆಯನ್ನು ನಾಶ ಮಾಡಲು ಪ್ರಯತ್ನಿಸುವ ಕೆಲವು ದುಷ್ಟ ಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ಕುಂದಾಪುರ ಈ ಹಿಂದೆ ಮದ್ರಾಸ್ ಪ್ರಾಂತಕ್ಕೆ ಸೇರಿದ್ದು ಕರಾವಳಿ ಭಾಗದ ಸ್ವತಂತ್ರ್ಯ ವೀರರು ತಮ್ಮ ಕಿಚ್ಚನ್ನು ಬ್ರಿಟೀಷರಿಗೆ ಮುಟ್ಟಿಸಿ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ಕಾರ್ಯವನ್ನು ನೆನೆಯಬೇಕು. ದೇಶದ ವಿವಿದೆಡೆ ನೆರೆ ಸಮಸ್ಯೆಯಿದ್ದು ಕೈಲಾದಷ್ಟು ಸಹಕಾರವನ್ನು ಚೆಕ್ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿ ದೇಶ ಪ್ರೇಮವನ್ನು ತೊರಿಸಬೇಕಾಗಿದೆ’ ಎಂದು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ನಾಯಕ್ ಗೌರವರಕ್ಷೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕಮಿಷನರ್ ಡಾ. ಮಧುಕೇಶ್ವರ್ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಂದಾಪುರ ವಲಯದ ಸರಕಾರಿ ಪ್ರೌಢ ಶಾಲೆಯ ಐದು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಯಿತು
ಭಾರೀ ಮಳೆಯಿಂದ ಕೆಲವು ಕಾರ್ಯಕ್ರಮಗಳಿಗೆ ತೊಂದರೆ ಆಯಿತು
ಸ್ವಾತಂತ್ರ ದಿನಾಚರಣೆಯ ವೇಳೆ ಭಾರಿ ಮಳೆ ಸುರಿಯಿತು ಗಾಂಧಿ ಮೈದಾನದಲ್ಲಿ ಎಲ್ಲಿ ಕಂಡರೂ ನೀರು ತುಂಬಿತ್ತು. ಮೊದಲೇ ನೆರೆ ಹಾವಳಿ ಹಿನ್ನೆಲೆಯಲ್ಲಿ ಸರಳ ಸ್ವಾತಂತ್ರ್ಯೋತ್ಸವ ಆಚರಣೆಗೆ ಸೂಚಿಸಲಾಗಿತ್ತು. ಆದರೆ ಕುಂದಾಪುರದಲ್ಲಿ ಎಡಬಿಡದೆ ಮಳೆ ಸುರಿದಿದ್ದು ಪರೇಡ್ ಮಾಡಲು ಅಡಚಣೆಯಾಗಿ. ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್ ಅವರ ನೇತೃತ್ವದಲ್ಲಿ ಪೊಲೀಸ್, ಗೃಹ ರಕ್ಷಕ, ಎನ್ಸಿಸಿ, ಸ್ಕೌಟ್ಸ್ ಎಂಡ್ ಗೈಡ್ಸ್, ಭಾರತ್ ಸೇವಾದಳ ತಂಡ, ವಿವಿಧ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಆದರೆ ಕೂಡ ಮಳೆ ತಿವ್ರತೆಯಿಂದ ಅದನ್ನು ರದ್ಧುಗೊಳಿಸಲಾಗಿತ್ತು. ಮಳೆಯ ನಡುವೆಯೂ ಮಕ್ಕಳು ಕೊಡೆ ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲೆಗಳಿಗೆ ವಹಿಸಿಕೊಟ್ಟ ಸಾಂಸ್ಕ್ರತಿಕ ಕಾರ್ಯಕ್ರಮಗಳು ರದ್ದಾದವು.
ಕುಂದಾಪುರ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಶಿಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ವಂದಿಸಿದರು. ಕುಂದಾಪುರ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್ ಕುಮಾರ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗಭೂಷಣ್ ಉಡುಪ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಪುರಸಭೆಯ ಹಾಲಿ ಸದಸ್ಯರು, ಮಾಜಿ ಪುರಸಭಾಧ್ಯಕ್ಷರು, ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.