ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ ಜಿಲ್ಲೆಯಲ್ಲಿ ನೀರು ಸಂಗ್ರಹಣೆ ಹಾಗೂ ಸಂರಕ್ಷಣೆ ಕುರಿತ ಕಾಮಗಾರಿಗಳ ವೀಕ್ಷಣೆ ಋತ್ವಿಕ್ ಪಾಂಡೆ
ಕೋಲಾರ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ನೀರು ಸಂಗ್ರಹಣೆ ಹಾಗೂ ಸಂರಕ್ಷಣೆ ಕುರಿತ ಕಾಮಗಾರಿಗಳ ವೀಕ್ಷಣೆ ಮಾಡಲಾಗುತ್ತಿದೆ ಎಂದು ಭಾರತ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಋತ್ವಿಕ್ ಪಾಂಡೆ ಅವರು ತಿಳಿಸಿದರು.
ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು, ಕೆಜಿಎಫ್ ಹಾಗೂ ಬಂಗಾರಪೇಟೆ ತಾಲ್ಲೂಕುಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ ಅವರು ಮಾತನಾಡಿದರು. ಕೆ.ಜಿ.ಎಫ್ನ ಸೈನೆಡ್ ಗುಡ್ಡದ 50 ಎಕರೆ ಪ್ರದೇಶದಲ್ಲಿ ಹೊಂಗೆ, ಬೇವು, ಅರಳಿ, ಆಲ ಹಾಗೂ ಕತ್ತಾಳೆ ಗಿಡಗಳನ್ನು ನೆಟ್ಟು ಹಸರೀಕರಣ ಮಾಡಿರುವುದು ಶ್ಲಾಘನೀಯ. ಇದರಿಂದ ಸೈನೈಡ್ ಗುಡ್ಡದ ಧೂಳು ಕೆ.ಜಿ.ಎಫ್ ನಗರಕ್ಕೆ ಹೋಗುತ್ತಿದ್ದದ್ದು ನಿಂತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ಮಾತನಾಡಿ, ಸೈನೈಡ್ ಗುಡ್ಡದಲ್ಲಿ ಮರಗಳು ಸ್ವಲ್ಪ ಎತ್ತರಕ್ಕೆ ಬಂದ ನಂತರ ಟ್ರೀ ಪಾರ್ಕ್ ರೀತಿ ಮಾಡಲು ಕ್ರಮ ವಹಿಸಲಾಗುವುದು. ಇದರಿಂದ ಇದು ಒಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಚೆಕ್ಡ್ಯಾಂಗಳಲ್ಲಿ ನೀರು ಸಂಗ್ರಹಣೆಯಾಗುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.
ಜಂಟಿ ಕಾರ್ಯದರ್ಶಿಯವರನ್ನು ಒಳಗೊಂಡ ತಂಡವು ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಟ್ರಂಚ್ ಕಂ ಬಂಡ್ ಕಾಮಗಾರಿ, ಗಿಡ ನಾಟಿ ಮಾಡಿರುವುದು ಹಾಗೂ ಗೋಕುಂಟೆ ಕಾಮಗಾರಿ, ಉತ್ತನೂರು ಗ್ರಾಮದ ಕಲ್ಯಾಣಿ ಅಭಿವೃದ್ಧಿ, ಕೊತ್ತಂಡಹಳ್ಳಿ ಗ್ರಾಮದ ಮಲ್ಟಿ ಆರ್ಚ್ ಚೆಕ್ಡ್ಯಾಂ ಪರಿವೀಕ್ಷಣೆ, ಕೆಜಿಎಫ್ ತಾಲ್ಲೂಕಿನ ಗನ್ನೆರಹಳ್ಳಿ, ಸರ್ವರೆಡ್ಡಿಹಳ್ಳಿ ಗ್ರಾಮದ ಮಲ್ಟಿ ಆರ್ಚ್ ಚೆಕ್ಡ್ಯಾಂ ಪರಿವೀಕ್ಷಣೆ ಮಾಡಿ ಕೆಜಿಎಫ್ ಸೈನೈಡ್ ಗುಡ್ಡದಲ್ಲಿ ಅರಣ್ಯೀಕರಣ ಮಾಡಿರುವುದನ್ನು ವೀಕ್ಷಿಸಿದರು. ನಂತರ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಜಲಾಶಯದ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ನ ಯೋಜನಾಧಿಕಾರಿಗಳಾದ ರವಿಚಂದ್ರ, ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿಗಳಾದ ದೇವರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.