ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಸರ್ಕಾರಿ ವಂಚಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಗೆ ತರಲು ಸಂಸದ ಮುನಿಸ್ವಾಮಿ ಗಮನ ಹರಿಸುವರೇ
ಕೋಲಾರ : ಹಲವು ಪ್ರಥಮಗಳಿಗೆ ಮೂಲವಾದ ಕೋಲಾರ ಜಿಲ್ಲೆ ಹಿಂದುಳಿಯಲು ಕಾರಣರಾದ ಸ್ಥಳೀಯ ಸಂಸ್ಥೆಗಳ ಪಟ್ಟಿ ನಾಗರೀಕ ಸಮಾಜ ಆತಂಕದಲ್ಲಿದೆ. ಉನ್ನತ ಮತ್ತು ವೃತ್ತಿಪರ ಕೋರ್ಸುಗಳ ವಿದ್ಯಾಭ್ಯಾಸಕ್ಕೆ ಇಲ್ಲಿನ ವಿದ್ಯಾರ್ಥಿ ಸಮುದಾಯ ಬೇರೆ ಜಿಲ್ಲೆಗಳಲ್ಲಿನ ಸರ್ಕಾರಿ ಕಾಲೇಜುಗಳನ್ನು ಅವಲಂಬಿಸಬೇಕಾಗಿದೆ. ಜಿಲ್ಲೆಯಲ್ಲಿ ಖಾಸಗಿ ಸ್ವಾಮ್ಯದ ಬೆರಳಣಿಕೆಯಷ್ಟು ಸಂಸ್ಥೆಗಳನ್ನು ಹೊರತು ಪಡಿಸಿದರೆ ಮತ್ಯಾವುದೂ ಸರ್ಕಾರಿ ಸಂಸ್ಥೆಗಳು ಇಲ್ಲದಿರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುವಂತಾಗಿದೆ. ಇಲ್ಲಿನ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಈ ಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು ವಿಧಿ ಇಲ್ಲದೆ ಮಕ್ಕಳನ್ನು ಬೇರೆ ಜಿಲ್ಲೆಗಳ ಸಂಸ್ಥೆಗಳಿಗೆ ವಿದ್ಯಾಭ್ಯಾಸಕ್ಕೆ ಸೇರಿಸುವಂತಾಗಿದೆ.
ಚಿನ್ನದ ನಾಡು ದೇಶದಲ್ಲಿಯೇ ಮೊಟ್ಟಮೊದಲ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಕೋಲಾರದ ಚಿನ್ನದ ಗಣಿ, ಜಗತ್ ಪ್ರಸಿದ್ಧ ಮೈನಿಂಗ್ ವಿಜ್ಞಾನಿಗಳನ್ನು ನೀಡಿದ ಸ್ಕೂಲ್ ಆಫ್ ಮೈನ್ಸ್, ತಂತ್ರಜ್ಞಾನದ ಪಿತಾಮಹ ಸರ್.ಎಂ.ವಿಶ್ವೇಶ್ವರಯ್ಯ, ಇಸ್ರೋ ವಿಜ್ಞಾನಿ ಸಿ.ಎನ್.ಆರ್.ರಾವ್ ಮುಂತಾದ ನೂರಾರು ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ ತಂತ್ರಜ್ಞಾನಿಗಳನ್ನು ಕೊಟ್ಟ ಜಿಲ್ಲೆ ಕೋಲಾರ ಇಂದು ತಂತ್ರಜ್ಞಾನಕ್ಕೆ ಪೂರಕವಾದ ಮೂಲಭೂತ ಶಿಕ್ಷಣ ಸಂಸ್ಥೆಗಳಿಲ್ಲದೆ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅವಕಾಶಗಳಿಲ್ಲದೆ ಇಲ್ಲಿ ಕೊರಗುವಂತಾಗಿದೆ.
ಕರ್ನಾಟಕ ರಾಜ್ಯದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜುಗಳಿದೆ. ಅವು ಅಲ್ಲಿನ ಸ್ಥಳೀಯ ವೈದ್ಯಕೀಯ ಆಕಾಂಕ್ಷೆಯ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಆ ಭಾಗದಲ್ಲಿ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಯತ್ತ ಮುನ್ನಡೆಯುತ್ತಿರುವುದು ಗಮನಿಸಲೇಬೇಕಾದ ಅಂಶವಾಗಿರುತ್ತದೆ. ಅದೇ ರೀತಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಸ್ವಾಮ್ಯದ ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿವರ್ಷ ಆ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶಗಳ ಬಾಗಿಲುಗಳು ಮುಕ್ತವಾಗಿದೆ. ಈ ಮೂಲಕ ಆ ಭಾಗದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕೆ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವುದು ನಮ್ಮ ಕಣ್ಣಮುಂದಿದೆ.
ಮತ್ತೊಂದೆಡೆ ಅರೆ ವೈದ್ಯಕೀಯ ಮತ್ತು ತಾಂತ್ರಿಕೇತರ ಹಲವು ಉದ್ಯೋಗಾಧಾರಿತ ಶಿಕ್ಷಣ ಸಂಸ್ಥೆಗಳು ಸಹ ಸರ್ಕಾರ ಕಡೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹಾಗೂ ಸಂಘಟಿತ ಕಾರ್ಮಿಕ ವಲಯಕ್ಕೆ ಹೆಚ್ಚು ಸಂಖ್ಯೆಯಲ್ಲಿ ಮಾನವ ಸಂಪನ್ಮೂಲವನ್ನು ನೀಡುತ್ತಿದ್ದು ಅದರ ಬಹುಪಾಲು ರಾಜ್ಯದ ಮಧ್ಯಭಾಗ ಮತ್ತು ಉತ್ತರ ಭಾಗದ ಜಿಲ್ಲೆಗಳ ಪಾಲಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕರ್ನಾಟಕದ ಬಹುಪಾಲು ಆಡಳಿತ ವರ್ಗಕ್ಕೆ ಆಡಳಿತಗಾರರು ಮತ್ತು ಸಿಬ್ಬಂದಿ ವರ್ಗವನ್ನು ಕೊಡುಗೆಯಾಗಿ ನೀಡಿರುವ ಕೋಲಾರ ಜಿಲ್ಲೆಯ ಈಗಿನ ತಲೆಮಾರಿನ ಯುವ ಸಮುದಾಯ ಭವಿಷ್ಯದಲ್ಲಿ ಉದ್ಯೋಗ ಅವಕಾಶದಿಂದ ವಂಚಿತರಾಗಲು ಸರ್ಕಾರ ಪರೋಕ್ಷವಾಗಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಏಕೆಂದರೆ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಲಿ, ವೈದ್ಯಕೀಯ ಶಿಕ್ಷಣ ಸಂಸ್ಥೆಯಾಗಲಿ, ಕೌಶಲ್ಯ ಅಭಿವೃದ್ಧಿ ಸಂಸ್ಥೆಯಾಗಲಿ ಹಾಗೂ ಉದ್ಯೋಗಾಧಾರಿತ ಇನ್ನಿತರೆ ತರಬೇತಿ ವಿದ್ಯಾಸಂಸ್ಥೆಗಳು ಇಲ್ಲದೆ ಇಲ್ಲಿನ ಯುವ ವಿದ್ಯಾರ್ಥಿ ಸಮುದಾಯ ಪರ ಜಿಲ್ಲೆಗಳ ವಿದ್ಯಾಸಂಸ್ಥೆಗಳನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿಬಂದಿದೆ.
ಇಂತಹ ಸಂಕಷ್ಠದಲ್ಲಿರುವ ವಿದ್ಯಾರ್ಥಿಗಳು ಮತ್ತು ಪೋಷಕರ ಸಮಸ್ಯೆಗಳಿಗೆ ಸ್ಪಂಧಿಸಲು ಇಚ್ಚಾಶಕ್ತಿ ಇಲ್ಲದ ಜನಪ್ರತಿನಿಧಿಗಳ ಕೊರತೆಯಿಂದಾಗಿ ಬಳಲುವಂತಾಗಿತ್ತು. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಆಲೋಚನೆಯನ್ನು ಈಗಿನ ಸಂಸದರು ಮಾಡುವರೇ ಎಂಬುದು ಕೋಲಾರ ಜಿಲ್ಲೆಯ ಜನ ನಿರೀಕ್ಷೆಯಾಗಿದೆ. ಸಂಸದರು ಗಮನ ಹರಿಸಿ ಸರ್ಕಾರಿ ಉನ್ನತ ಶಿಕ್ಷಣ ವಂಚಿತ ಸಂಸ್ಥೆಗಳನ್ನು ಸ್ಥಾಪಿಸಲು ಇಚ್ಛಾಶಕ್ತಿ ತೋರುವರೇ.