ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಜನರಿಗೆ ತಿಳಿಯುವಂತಾಗಬೇಕು-ಎಸ್.ಮುನಿಸ್ವಾಮಿ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ 

ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಜನರಿಗೆ ತಿಳಿಯುವಂತಾಗಬೇಕು-ಎಸ್.ಮುನಿಸ್ವಾಮಿ

ಕೋಲಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳ ಮಾಹಿತಿಯು ಜನರಿಗೆ ತಿಳಿಯಬೇಕು. ಇದರಿಂದ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ತಿಳಿಸಿದರು. 

 ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆಪರೇಷನ್ ಗ್ರೀನ್ ಯೋಜನೆಯಡಿ ಟೊಮ್ಯೋಟೋ ಸಮಗ್ರ ಅಭಿವೃದ್ಧಿ ಕಾರ್ಯಾಚರಣೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ದೇಶದ ಬೆನ್ನೆಲುಬು. ಶ್ರೀಲಂಕಾದಲ್ಲಿ ಬಾಂಬ್ ದಾಳಿ ಆದ ನಂತರ ಪಾಕಿಸ್ತಾನಕ್ಕೆ ಕೋಲಾರದಿಂದ ಆಗುತ್ತಿದ್ದ ಟೊಮೊಟೋ ರಪ್ತನ್ನು ನಿಲ್ಲಿಸಿದ್ದು ಶ್ಲಾಘನೀಯ. ಪ್ರತಿಯೊಬ್ಬರು ದೇಶಾಭಿಮಾನವನ್ನು ಹೊಂದಿರಬೇಕು ಎಂದರು. 

 ಕೋಲಾರವು ಮಾವು ಮತ್ತು ಟೊಮಾಟೊ ಬೆಳೆಗೆ ಹೆಸರುವಾಗಿಯಾಗಿದೆ. ಆದ್ದರಿಂದ ಇಲ್ಲಿ ಮಾವು ಮತ್ತು ಟೊಮ್ಯಾಟೊ ಬೆಳೆಗಳ ಸಂಸ್ಕರಣ ಘಟಕ ಅತ್ಯಗತ್ಯವಾಗಿದೆ. ಸಂಸ್ಕರಣ ಘಟಕ ಸ್ಥಾಪಿಸಲು ಹೋಳೂರು ಸಂಘದವರು ಮಾತ್ರ ಮುಂದೆ ಬಂದಿದ್ದು, ಇನ್ನು ಹೆಚ್ಚಿನ ಸಹಕಾರ ಸಂಘಗಳು ಅವಕಾಶವನ್ನು ಸುದಪಯೋಗಪಡಿಸಿಕೊಳ್ಳಲು 50 ಕೋಟಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದ್ದು, 1300 ರಿಂದ 1500 ಅಡಿ ಆಳಕ್ಕೆ ಅಂತರ್ಜಲ ಇಳಿದಿದೆ. ಜಿಲ್ಲೆಯ ರೈತರು ಶ್ರಮಜೀವಿಗಳಾಗಿದ್ದು, ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. 

 ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ,  ಭಾರತ ಸರ್ಕಾರದ ಆಪರೇಷನ್ ಗ್ರೀನ್ ಯೋಜನೆ ಉತ್ತಮವಾದ ಯೋಜನೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಿ ಸಾಗಾಣೆ ಮಾಡಿ ಉತ್ತಮವಾದ ಬೆಲೆಗೆ ಮಾರಾಟ ಮಾಡಿ ಆದಾಯ ಗಳಿಸಲು ಸಾಧ್ಯವಾಗುತ್ತದೆ. ರೈತರು ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಮಾಡಿಸುವುದರಿಂದ ಆಗುವ ಬೆಳೆಯ ನಷ್ಟಕ್ಕೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಮೇ 18 ರಿಂದ 24 ರವರೆಗೆ ಆದ ಮಳೆಯಿಂದ ಆದ ಬೆಳೆ ಹಾನಿಗೆ 3.27 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ನಂತರ ಆದ ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. 

 ದಕ್ಷಿಣ ಏಷ್ಯಾದಲ್ಲಿಯೇ ಕೋಲಾರ ಜಿಲ್ಲೆ ಟೊಮೊಟೊ ಬೆಳೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯ 8,707 ಹೆಕ್ಟೇರ್ ಪ್ರದೇಶದಲ್ಲಿ ಟೊಮಾಟೊವನ್ನು ಬೆಳೆಯಲಾಗುತ್ತದೆ. 4,97,107 ಮೆಟ್ರಿಕ್ ಟೌನ್ ಉತ್ಪಾದನೆ ಮಾಡಿ ಸುಮಾರು 300 ಕೋಟಿ ವಹಿವಾಟು ನಡೆಯುತ್ತದೆ ಎಂದ ಅವರು ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಜಾಗ ನೀಡಲು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 

 ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕದ್ರಿಗೌಡ ಅವರು ಮಾತನಾಡಿ, ಕರ್ನಾಟಕವು ಸೇರಿದಂತೆ ಭಾರತ ಸರ್ಕಾರವು 8 ರಾಜ್ಯಗಳಲ್ಲಿ ಆಪರೇಷನ್ ಗ್ರೀನ್ ಯೋಜನೆಯನ್ನು 2018 ರಲ್ಲಿ ಜಾರಿಗೆ ತಂದಿದೆ. ಕರ್ನಾಟಕದ ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಗೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಟೊಮೊಟೋ ಬೆಳೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಟೊಮೊಟೋ ಬೆಲೆ ಕುಸಿತ ಉಂಟಾದಾಗ ಸಂಗ್ರಹಣೆ ಮಾಡಲು ಹಾಗೂ ಸಾಗಾಣೆ ಮಾಡಲು ಶೇ 50% ಸಬ್ಸಿಡಿ  ನೀಡಲಾಗುವುದು ಎಂದರು. 

 ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಕೆ.ಆರ್ ರಮೇಶ್ ಕುಮಾರ್ ಅವರು 

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. 

ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಡಿ.ಎಲ್. ನಾಗರಾಜ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್‍ನ ಕೃಷಿ ಸಮಿತಿಯ ಅಧ್ಯಕ್ಷರಾದ ಪ್ರತಾಪ್ ರಾಮಚಮದ್ರ, ಜಿಲ್ಲಾ ಪಂಚಾಯತ್ ಸದಸ್ಯರಾದ ಅರವಿಂದ್, ಮಹೇಶ್, ಜಯಪ್ರಕಾಶ್, ಆಪರೇಷನ್ ಗ್ರೀನ್ ಯೋಜನೆಯ ಉಪನಿರ್ದೇಶಕರಾದ ಶ್ಯಾಮಸುಂದರ್ ಅಗರ್‍ವಾಲ್, ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಬಿ.ಜಿ ಪ್ರಕಾಶ್, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಮಂಜುನಾಥ್‍ಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ