ಮಕ್ಕಳಲ್ಲಿ ಉತ್ತಮ ಆರೋಗ್ಯ, ಸಮಾಜಮುಖಿ ಮನಸ್ಥಿತಿಗೆ ಯೋಗ ಮತ್ತು ಕ್ರೀಡೆಗಳು ಹೆಚ್ಚು ಸಹಕಾರಿ-ವಿ.ಮುನಿರಾಜು

ವರದಿ:ಶಬ್ಬೀರ್ ಅಹ್ಮದ್

ಮಕ್ಕಳಲ್ಲಿ ಉತ್ತಮ ಆರೋಗ್ಯ, ಸಮಾಜಮುಖಿ ಮನಸ್ಥಿತಿಗೆ
ಯೋಗ ಮತ್ತು ಕ್ರೀಡೆಗಳು ಹೆಚ್ಚು ಸಹಕಾರಿ-ವಿ.ಮುನಿರಾಜು

ಕೋಲಾರ:- ಉತ್ತಮ ಆರೋಗ್ಯ ಮತ್ತು ಸಮಾಜಮುಖಿ ಕಾರ್ಯಕಗಳತ್ತ ಒಲವು ಹೆಚ್ಚಲು ಯೋಗ ಮತ್ತು ಕ್ರೀಡೆ ಹೆಚ್ಚು ಸಹಕಾರಿ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಅಭಿಪ್ರಾಯಪಟ್ಟರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಗನ್ ಸ್ಪೋಟ್ಸ್ ಕ್ಲಬ್ ವತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಯೋಗ ತರಬೇತಿ ನೀಡಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ದತಿಯಲ್ಲಿನ ಬದಲಾವಣೆ ಹಾಗೂ ಐಷರಾಮಿ ಬದುಕಿನಿಂದ ಅನೇಕ ಕಾಯಿಲೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತಿವೆ, ಇಂತಹ ರೋಗಗಳಿಂದ ದೂರವಾಗಿ ಉತ್ತಮ ಜೀವನ ನಡೆಸಲು ಯೋಗ ಹೆಚ್ಚು ಉಪಯುಕ್ತ ಎಂದು ತಿಳಿಸಿದರು.
ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡುವ ಮೂಲಕ ಪೋಷಕರು ಅವರನ್ನು ಪುಸ್ತಕಕ್ಕೆ ಸೀಮಿತ ಮಾಡುತ್ತಿದ್ದಾರೆ, ಇದರಿಂದ ಮಕ್ಕಳಿಗೆ ಸಮಗ್ರ ಶಿಕ್ಷಣ ಸಿಕ್ಕಂತಾಗುವುದಿಲ್ಲ ಎಂದು ತಿಳಿಸಿ, ಕ್ರೀಡೆ,ಯೋಗ ಮತ್ತಿತರ ಚಟುವಟಿಕೆಗಳೂ ಕ್ರೀಡೆಯಷ್ಟೇ ಪ್ರಾಮುಖ್ಯತೆ ಗಳಿಸಿವೆ ಎಂದು ತಿಳಿಸಿದರು.
ಕ್ರೀಡೆ ಕಲಿಕೆಗೂ ಪ್ರೇರಕ ಎಂಬ ಸತ್ಯವನ್ನು ಪೋಷಕರು ಅರಿಯಬೇಕು, ದಿನದ ಕೆಲವೊತ್ತು ಕ್ರೀಡೆಗೆ ಸೀಮಿತವಿಟ್ಟು ಮಕ್ಕಳಿಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಬೇಸಿಗೆ ರಜೆಯಲ್ಲಿ ಮಕ್ಕಳು ಎಲ್ಲೆಲ್ಲೋ ಹೋಗಿ ಈಜು ಕಲಿಯಲು ಸಾಹಸ ಪಡುವುದು, ಅನಾಹುತಗಳಿಗೆ ಅವಕಾಶವಾಗುತ್ತಿದೆ, ಇಂತಹ ಸಂದರ್ಭದಲ್ಲಿ ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ತರಬೇತುದಾರರ ರಕ್ಷಣೆಯಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಮೂಲಕ ನೆರವಾಗುತ್ತಿರುವುದು ಸ್ವಾಗತಾರ್ಹ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಮುನಿರಾಜು ಮಕ್ಕಳಿಗೆ ಯೋಗಾಭ್ಯಾಸದ ಕೆಲವು ಸುಲಭ ಆಸನಗಳನ್ನು ಕಲಿಸಿಕೊಟ್ಟು, ನೀವು ಯೋಗ ಕಲಿಯಿರಿ, ಉತ್ತಮ ಆರೋಗ್ಯ ಪಡೆಯಲು ನಿರಂತರವಾಗಿ ಅಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಸುರೇಶ್‍ಕುಮಾರ್, ಹಾಜರಿದ್ದು, ಉತ್ತಮ ದೇಹದಾಢ್ರ್ಯತೆಗೆ ಯೋಗ,ಕ್ರೀಡೆ ಎಷ್ಟು ಸಹಕಾರಿ ಎಂಬುದನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಶಿಬಿರದ ನೇತೃತ್ವ ವಹಿಸಿರುವ ಜಗನ್ನಾಥ್, ಪುರುಷೋತ್ತಮ್, ರಾಜೇಶ್ ಸೇರಿದಂತೆ ಶಿಕ್ಷಕರು ಹಾಜರಿದ್ದರು.

ಚಿತ್ರಶೀರ್ಷಿಕೆ:(ಫೋಟೊ-11ಕೋಲಾರ7):ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಗನ್ ಸ್ಟೋಟ್ರ್ಸ್ ಕ್ಲಬ್‍ನಿಂದ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಯೋಗ ತರಬೇತಿ ನೀಡಿದ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು.

ಚಿತ್ರಶೀರ್ಷಿಕೆ:(ಫೋಟೊ-11ಕೋಲಾರ7-1):ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಗನ್ ಸ್ಟೋಟ್ರ್ಸ್ ಕ್ಲಬ್‍ನಿಂದ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳೊಂದಿಗೆ ಗಣ್ಯರು, ಶಿಕ್ಷಕರು.