ಶ್ರೀನಿವಾಸಪುರ:ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟನೆ

ವರದಿ: ಶಬ್ಬೀರ್ ಅಹ್ಮದ್

ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ ಉದ್ಘಾಟಿಸಿದರು.

ಶ್ರೀನಿವಾಸಪುರ: ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಾರೆಡ್ಡಿ ಹೇಳಿದರು.
ಮೈತ್ರಿ ಪಕ್ಷಗಳ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಿದ ಪರಿಣಾಮವಾಗಿ ವೇಮಗಲ್ ಹಾಗೂ ನರಸಾಪುರ ಸಮೀಪ ಕೈಗಾರಿಕೆಗಳು ಸ್ಥಾಪನೆಗೊಂಡಿವೆ. ಅದರಿಂದ ನಿರುದ್ಯೋಗ ನಿವಾರಣೆಗೆ ಸಹಾಯಕವಾಗಿದೆ. ನ್ಯಾರೋಗೇಜ್ ರೈಲು ಮಾರ್ಗವನ್ನು ಬ್ರಾಡ್ ಗೇಜ್ಗೆ ಬದಲಿಸಿದ್ದರಿಂದ ಹೆಚ್ಚಿನ ಜನರಿಗೆ ರೈಲು ಪ್ರಯಾಣ ಸೇವೆ ದೊರೆತಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಜನರಿಗೆ ಕೊಟ್ಟ ಮಾತನ್ನು ಈಡೇರಿಸಿಲ್ಲ. ಬ್ಯಾಂಕ್ ಖಾತೆಗೆ ಹಣ ತುಂಬಲಿಲ್ಲ. ವಿದೇಶಗಳಿಂದ ಕಪ್ಪು ಹಣವನ್ನು ತರಲಿಲ್ಲ. ಉದ್ಯೋಗ ಸೃಷ್ಟಿ ಮಾಡಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುವುದರ ಮೂಲಕ ಕೊಟ್ಟ ಮಾತನನ್ನು ಉಳಿಸಿಕೊಂಡಿವೆ ಎಂದು ಹೇಳಿದರು.
ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಮಾತನಾಡಿ, ಕೋಮುವಾದಿ ಬಿಜೆಪಿ ಮುಖಂಡರು ದೇಶಕ್ಕೆ ಧರ್ಮ ಬೋಧಿಸಬೇಕಾಗಿಲ್ಲ. ದೇಶದ ಎಲ್ಲ ಧರ್ಮೀಯರಿಗೂ ಸಂವಿಧಾನ ಸಮಾನವಾದ ಧಾರ್ಮಿಕ ಹಕ್ಕು ನೀಡಿದೆ. ಹಿಂದೂಗಳ ಮನಸ್ಸನ್ನು ಭಾವನಾತ್ಮಕವಾಗಿ ಕೆಡಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿಗೆ ಮತದಾರರು ಪಾಠ ಕಲಿಸಬೇಕು ಎಂದು ಹೇಳಿದರು.
ಎಲ್.ಗೋಪಾಲಕೃಷ್ಣ ಮಾತನಾಡುವಾಗ ಗಳಗಳನೆ ಅತ್ತು ಸಭಿಕರಿಗೆ ಅಚ್ಚರಿ ಮೂಡಿಸಿದರು. ಹೆಚ್ಚಿನ ಸಂಖ್ಯೆಯ ಜನ ಬಂದಿರುವುದರಿಂದ ಸಂತೋಷ ತಡೆಯಲಾಗದೆ ಅಳು ಬಂದಿತು ಎಂದು ಹೇಳಿದರು.
ಮಾಲೂರು ಶಾಸಕ ನಂಜೇಗೌಡ ಮಾತನಾಡಿ, ಕೆ.ಎಚ್.ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏಳು ಬಾರಿ ಗೆಲುವು ಸಾಧಿಸುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಉಳಿಸಿ ಬೆಳೆಸಿದ್ದಾರೆ. ಇಲ್ಲಿನ ಮತದಾರರು ಎಂದೂ ಬಿಜೆಪಿಗೆ ಮಣೆ ಹಾಕಿಲ್ಲ. ಹಾಗಾಗಿ ಈ ಸಲ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿರುವ ಕೆ.ಎಚ್.ಮುನಿಯಪ್ಪ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಬುಧವಾರ ಕಾಗ್ರೆಸ್ ಪಕ್ಷದ ಎರಡು ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿಯನ್ನು ಪ್ರಸ್ತಾಪಿಸಿದ ಅವರು, ಅಂಥ ಘಟನೆ ನಡೆಯಬಾರದಿತ್ತು. . ಸಣ್ಣಪುಟ್ಟ ಭಿನ್ನಾಭಿಪ್ರಾಯಗನ್ನು ಸರಿಪಡಿಸಿಕೊಳ್ಳಬೇಕು. ಚುನಾವಣೆಗೆ ಒಟ್ಟಾಗಿ ಹೋಗಬೇಕು. ಮೈತ್ರಿ ಧರ್ಮ ಪಾಲನೆಯಾಗಬೇಕು ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ವೆಂಕಟಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್, ಮುಖಂಡರಾದ ಜಮೀರ್ ಪಾಷ, ಎನ್.ಜಿ.ಬ್ಯಾಟಪ್ಪ ಬಿ.ಜಿ.ಸೈಯದ್ ಖಾದರ್, ಸಭೆಯಲ್ಲಿ ಮಾತನಾಡಿದರು.
ಮುಖಂಡರಾದ ಶೇಷಾಪುರ ಗೋಪಾಲ್, ಜಯದೇವ್, ನವೀನ್ ಕುಮಾರ್, ಟಿಎಂಬಿ ಮುಕ್ತಿಯಾರ್, ಅನ್ನೀಸ್ ಅಹ್ಮದ್, ಅಶ್ವತ್ಥರೆಡ್ಡಿ, ರಾಮಕೃಷ್ಣಾರೆಡ್ಡಿ, ವೆಂಕಟಾಚಲಪತಿ, ಕುಮಾರ್, ಸತ್ಯನಾರಾಯಣ, ರಾಮಮೂರ್ತಿ ಜಯಣ್ಣ, ಕವಿತ, ಮಂಜು, ನಂಜುಂಡಗೌಡ, ಮುಖೇಶ್, ಮಹಮದ್ ಷರೀಫ್, ಬೈಚಪ್ಪ, ಇದ್ದರು.