ಆನಂದ ಸಿ.ಕುಂದರ್ಗೆ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ

ಆನಂದ ಸಿ.ಕುಂದರ್ಗೆ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ

ಸಮಾಜದ ಅಭಿವೃದ್ಧಿಗೆ ನೀಡುವ ಕೊಡುಗೆಯಿಂದ ಜೀವನ ಸಾರ್ಥಕವಾಗು ತ್ತದೆ. ಇಲ್ಲಿ ಶ್ರೀಮಂತರು, ಸಾಮಾನ್ಯರು ಎಂಬ ಭೇದ ಇರುವುದಿಲ್ಲ. ಹೆಚ್ಚಿನ ಸಂಪನ್ಮೂಲ ಇದ್ದವರು ಹೆಚ್ಚು ನೆರವು ಕೊಡಬಹುದು. ಸಾಮಾನ್ಯರೂ ತಮ್ಮ ಮಿತಿಯಲ್ಲಿ ಸೇವೆ ಮಾಡಬಹುದು. ಮುಖ್ಯವಾಗಿ ಆ ಮನೋಭಾವ ಮುಖ್ಯ. ಸೇವೆ ಅಂದರೆ ಕೇವಲ ಹಣದ ದಾನ ಮಾತ್ರ ಬರುವುದಿಲ್ಲ. ನಮ್ಮ ಪರಿಸರ, ಪ್ರಕೃತಿ, ಉಳಿಸುವಲ್ಲಿ ನಾವು ಮಾಡುವ ಶ್ರಮ ಮಹತ್ತರ ಪಾತ್ರ ವಹಿಸುತ್ತದೆ. ನಾನು ಧಾರ್ಮಿಕ, ಶೈಕ್ಷಣಿಕ, ಉದ್ಯಮ, ಸಾಹಿತ್ಯ ಯಾವುದೇ ಕ್ಷೇತ್ರವಾಗಿದ್ದರೂ ಸಮಾಜಕ್ಕೆ ಅನುಕೂಲವಾಗಿದ್ದರೆ, ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ. ಕುಂದಪ್ರಭ ಸಂಸ್ಥೆಯಿಂದ ಪ್ರದಾನ ಮಾಡಿರುವ ಕೋ.ಮ.ಕಾರಂತ ಪ್ರಶಸ್ತಿ ನನಗೆ ಸ್ಫೂರ್ತಿ ತುಂಬಿದೆ, ಸಂತೋಷ ನೀಡಿದೆ ಎಂದು ಹಿರಿಯ ಮತ್ಯೋದ್ಯಮಿ, ಸರ್ವಮಾನ್ಯ ಧುರೀಣ ಆನಂದ ಸಿ.ಕುಂದರ್ ಹೇಳಿದರು.
ಕುಂದಾಪುರದ ಸರಕಾರಿ ಪ.ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಜ.20 ರಂದು ನಡೆದ ಕುಂದಪ್ರಭ-ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ಪತ್ರಕರ್ತ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿರುವ ಪ್ರಶಸ್ತಿಯನ್ನು ಈ ಹಿಂದೆ 18 ಮಂದಿ ವಿವಿಧ ಕ್ಷೇತ್ರದಲ್ಲಿ ಸೇವೆಗೈದವರು ಪಡೆದಿದ್ದಾರೆ. ಅವರ ಸಾಲಿನಲ್ಲಿ ನಾನು ಸೇರಿರುವುದು ಸಂತಸವಾಗಿದೆ. ಪ್ರತಿಯೊಬ್ಬರು ಜೀವನದಲ್ಲಿ ಏನಾದರೂ ಕೊಡುಗೆ ನೀಡುವ ಪ್ರಯತ್ನ ಮಾಡಬೇಕು. ಕೋಟದಲ್ಲಿ ಶ್ರೀನಿವಾಸ ಪೂಜಾರಿಯವರ ಪ್ರಯತ್ನದಿಂದ ಸ್ಥಾಪನೆಗೊಂಡ “ಕಾರಂತ ಥೀಂ ಪಾರ್ಕ್” ನಿಂದ ಪರಿಸರದ ಚಿತ್ರಣವೇ ಬದಲಾಗಿದೆ. ನನಗೂ ಅದರಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ಕುಂದಪ್ರಭ ಬಳಗ ಉತ್ತಮ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದು, ಸಮಾಜದ ಅಭಿವೃದ್ದಿಗೆ ನಾವೂ ನಮ್ಮ ಸಹಕಾರ ನೀಡೋಣ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಉದ್ಯಮಿ ದತ್ತಾನಂದ ಗಂಗೊಳ್ಳಿ ವಹಿಸಿದ್ದರು.
ಕರ್ನಾಟಕ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮಾರಂಭವನ್ನು ಉದ್ಘಾಟಿಸಿದರು.
ಅಂಕಣಗಾರ ಕೋ.ಶಿವಾನಂದ ಕಾರಂತರು ಕಾವ್ಯಭಿನಂದನ ಪತ್ರದ ಮೂಲಕ ಅಭಿನಂದಿಸಿದರು. ಕುಂದಪ್ರಭ ಬಳಗದ ವತಿಯಿಂದ ಆನಂದ ಸಿ.ಕುಂದರ್ ಅವರಿಗೆ ಸಂಭ್ರಮದಿಂದ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದಪ್ರಭ ಟ್ರಸ್ಟ್ ಮೂಲಕ ಪ್ರಕಟಿಸಲಾದ ಯು.ಎಸ್.ಶೆಣೈಯವರ “ಮೆಡ್ರಾಸ್ ಟೀ ಹೌಸ್” ಕೃತಿಯನ್ನು ಹಿರಿಯ ಲೇಖಕ ಪ್ರೇಮಶೇಖರ, ಮಣಿಪಾಲ ಬಿಡುಗಡೆಗೊಳಿಸಿದರು.
“ಇದೊಂದು ಖುಷಿ, ನೋವು ಎರಡೂ ಅನುಭವಗಳನ್ನು ನೀಡುತ್ತಾ ಚಿಂತನೆಗೆ ಹಚ್ಚುವ ಮೌಲಿಕ ಕೃತಿಯಾಗಿದ್ದು, ಓದಿಯೇ ತಿಳಿಯಬೇಕು. ಕೃತಿ ಗಂಗೊಳ್ಳಿ ಯನ್ನು ಕೇಂದ್ರವಾಗಿಸಿಕೊಂಡು ಬರೆದಿರುವುದಾದರೂ, ಇದÀರ ಮಿತಿ ವಿಸ್ತಾರವಾಗಿದೆ. ಯಾವುದೇ ಗ್ರಾಮೀಣ ಪ್ರದೇಶದಲ್ಲಿ ನಡೆದಿರಬಹುದಾದ ವಿಷಯವೂ ಇದಾಗಬಹುದು. ಈ ಪುಸ್ತಕದ ಓದಿನಿಂದ ನಮ್ಮ ಬಾಲ್ಯದ ನೆನಪುಗಳು ಮರುಕಳಿಸುತ್ತವೆ.” ಎಂದರು. ಎ.ಸಿ.ಕುಂದರ್ ಅವರ ಸಾಮಾಜಿಕ ಕಳಕಳಿಯನ್ನು ಅವರು ಕೊಂಡಾಡಿದರು.
ಅಭಿನಂದನಾ ನುಡಿಗಳನ್ನಾಡಿದ ಡಾ|ಯು.ಕಾಶಿನಾಥ ಪೈಯವರು ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಆನಂದ ಸಿ.ಕುಂದರ್ ಅವರಂತಹ ಸಜ್ಜನಿಕೆಯ, ಸಾಮಾಜಿಕ ಧುರೀಣರಿಗೆ ಪ್ರಶಸ್ತಿ ನೀಡಿರುವುದು ಸಂತಸದ ವಿಷಯವಾಗಿದೆ. ಅದರೊಂದಿಗೆ ಗಂಗೊಳ್ಳಿಯ ಸಜ್ಜನ ಯು.ಶೇಷಗಿರಿ ಶ್ಯಾನುಭಾಗರ ಸ್ಮರಣೆಯಲ್ಲಿ “ಮೆಡ್ರಾಸ್ ಟಿ ಹೌಸ್” ಕೃತಿ ಬಿಡುಗಡೆ ಸಹ ಅಭಿನಂದನೀಯ ಕಾರ್ಯ ಎಂದರು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಯು.ಸಂಗೀತಾ ಶೆಣೈ ಪ್ರಾರ್ಥನಾ ಗೀತೆ ಹಾಡಿದರು.ಎಚ್.ಸೋಮಶೇಖರ ಶೆಟ್ಟಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ವಿವರ ನೀಡಿದರು.
ಕೆ.ಕೆ.ರಾಮನ್, ಕಿರಣ್ ಭಟ್, ಡಾ|ಯು.ಸುಷ್ಮಾ ಶೆಣೈ, ಅತಿಥಿಗಳನ್ನು ಗೌರವಿಸಿದರು. ಪ್ರಾಂಶುಪಾಲ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.ಲೇಖಕ ಪಿ.ಜಯವಂತ ಪೈ ವಂದಿಸಿದರು.
ವೇಣುಗೋಪಾಲ್ ಭಟ್ ಕೋಟೇಶ್ವರ ತಂಡದಿಂದ ಭಾವಸಂಗೀತ ಕಾರ್ಯಕ್ರಮ ನಡೆಯಿತು

ಆನಂದ ಕುಂದರ್ ಅವರಿಗೆ ಕುಂದಪ್ರಭ” ದಿಂದ ಕೋ.ಮ.ಕಾರಂತ ಪ್ರಶಸ್ತಿ ಘೋಷಣೆಯಾದ ನಂತರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಅವರು ಪ್ರಶಸ್ತಿಗೆ ಅರ್ಹ ಎನ್ನುವುದು ಸಾಬೀತಾಯಿತು. ಪ್ರಶಸ್ತಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಲ್ಲ. ನಾವು ಕಾರಂತ ಹುಟ್ಟೂರ ಪ್ರಶಸ್ತಿ ಆಯ್ಕೆ ಮಾಡಿದ ನಂತರ ಹಲವಾರು ಪ್ರಶ್ನೆಗಳು ಕೆಲವರಿಂದ ಎದುರಿಸಬೇಕಾಗುತ್ತದೆ. ಕೊನೆಗೆ ಅದನ್ನು ನಿಭಾಯಿಸುವವರು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಕುಂದರ್ ಅವರು. ನಮ್ಮ ಊರಿನ ಜನರ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ ” ರಾಜಕೀಯ ” ಬಂದು ಬಿಡುತ್ತದೆ. ಆಗ ಆನಂದ ಕುಂದರ್ ಅವರಿಗೆ ಸಮಸ್ಯೆ ಪರಿಹರಿಸುವ ಜವಾಬ್ದಾರಿ ನೀಡಿದರೆ ಪರಿಹಾರವಾಗುತ್ತದೆ. ಹತ್ತಾರು ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಇದ್ದರೂ “ಸಿಟ್ಟುಬಾರದ” ಈ ವ್ಯಕ್ತಿ “ಸರ್ವಮಾನ್ಯ ಸಾಧಕ” ಎಂದು ಕರ್ನಾಟಕ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಪ್ರಭ ಕೋ.ಮ.ಕಾರಂತ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬದುಕಿನಲ್ಲಿ ಶ್ರೀಮಂತರಾಗುವುದು. ಅಧಿಕಾರ ಪಡೆಯುವುದು ಒಂದು ಪ್ರಕ್ರಿಯೆ. ಆದರೆ ಎಲ್ಲರೂ ಜನರ ಪ್ರೀತಿ, ವಿಶ್ವಾಸಗಳಿಸುವ ಸಾಧನೆ ಮಾಡುವುದಿಲ್ಲ. ಆದರೆ ಆನಂದ ಕುಂದರ್ ಮಾದರಿ ವ್ಯಕ್ತಿತ್ವದರಾಗಿದ್ದಾರೆ. ಕುಂದಪ್ರಭ ಮೇರು ವ್ಯಕ್ತಿತ್ವದ ಕೋ.ಮ.ಕಾರಂತರ ಸ್ಮರಣೆಯಲ್ಲಿ ನೀಡುತ್ತಿರುವ ಪ್ರಶಸ್ತಿಗೆ ಮಹತ್ವ ಇದೆ. ನೂರಾರು ಪ್ರತಿಭೆಗಳಿಗೆ ಅವಕಾಶ ನೀಡಿ ಮುನ್ನಡೆಸಿದ ಯು.ಎಸ್.ಶೆಣೈಯವರಿಂದ ಸ್ಫೂರ್ತಿ, ಮಾರ್ಗದರ್ಶನ ಪಡೆದವರಲ್ಲಿ ನಾನೂ ಒಬ್ಬ. ಪ್ರೀತಿ, ವಿಶ್ವಾಸವೇ ಅವರ ಕರೆಗೆ ಓಗೊಡುವಂತೆ ಮಾಡುತ್ತದೆ” ಎಂದರು.