

ಕುಂದಾಪುರ: ಬದುಕಿನಲ್ಲಿ ಬರುವ ಸವಾಲುಗಳನ್ನು ಛಲದಿಂದ ಸ್ವೀಕರಿಸಿ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ ಎಸ್. ರಾಜಣ್ಣ ಅವರು ಹೇಳಿದರು.
ಅವರು ಮೇಲೆ 26ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ಪ್ರೇರಣಾ ಉಪನ್ಯಾಸ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಜೀವನದಲ್ಲಿ ಎದುರಿಸುವ ಅವಮಾನ ಕೀಳರಿಮೆ ಸೋಲುಗಳನ್ನು ಗೆಲುವಿನ ಸಾಧನೆಗೆ ಸೋಪಾನ ಮಾಡಿಕೊಳ್ಳಬೇಕು. ಈ ಜೀವನ ನನ್ನ ಸೌಭಾಗ್ಯ ವಾಗಿದೆ. ದೇವರು ನನಗೆ ಕೊಟ್ಟ ವರವಾಗಿದೆ. ಪ್ರಪಂಚ ಹೇಗೆ ನೋಡಲಿ ನಮ್ಮ ಸಾಧನೆಯ ಗುರಿ ನಿಚ್ಚಳವಾಗಿರಬೇಕು. ಕೇವಲ ಗುರಿಯನ್ನು ಮಾತ್ರ ನೋಡುತ್ತಿರಬೇಕು. ಹಾಗಿದ್ದಾಗ ಏನೆ ನೋವುಗಳನ್ನು ಇದ್ದರೂ ಸಾಧನೆಗಳು ಅವುಗಳನ್ನು ಮರೆಸುತ್ತವೆ ಎನ್ನುವುದಕ್ಕೆ ನಾನೆ ಸಾಕ್ಷಿ. ಸಮಾಜದ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡುವ ಅವಕಾಶ ನನಗೆ ದೊರೆತಿದೆ ಹಾಗೆ ನಿಮ್ಮಲ್ಲಿಯು ಸಾಧನೆಯ ಶಕ್ತಿ ಯುಕ್ತಿ, ಮನೋಸ್ಥೈರ್ಯ ಮತ್ತು ಜ್ಞಾನವಿದೆ. ಅದನ್ನು ನಿಮ್ಮ ಯಶಸ್ವಿ ಬದುಕಿಗಾಗಿ ಉಪಯೋಗಿಸಿಕೊಳ್ಳಿ. ವಿದ್ಯಾರ್ಥಿಗಳು ಸಾಧನೆಯು ಶಿಖರವಾಗಿರಿ. ಸಾಧನೆಗೆ ಪ್ರೇರಣಯಾಗಿರುವ ತಂದೆ ತಾಯಿಗಳು, ಗುರುಗಳು, ಸಂಸ್ಥೆಗೆ ಮತ್ತು ಸಮಾಜಕ್ಕೆ ಋಣಿಯಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಸಿ.ಎ ನಾಗರಾಜ್ ಆಚಾರ್ಯ ಮಾತನಾಡಿ ಯಶಸ್ವಿ ಸಾಧನೆಯ ಹಾದಿಯಲ್ಲಿ ಪ್ರಯತ್ನ ಶೀಲತೆ ಬಹಳ ಮುಖ್ಯವಾಗಿರುತ್ತದೆ. ಆ ನೆಲೆಯಲ್ಲಿ ಜ್ಞಾನ ಪೂರಕ ಸೌಲಭ್ಯಗಳನ್ನು ಉಪಯೋಗಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ ವಂದಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ 89.6 ಎಫ್.ಎಮ್. ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.





