

ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಶಿರ್ವ ಶಾಖೆಯು ಮೇ 19ರಂದು ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು
ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೋನ್ಸನ್ ಡಿ ಅಲ್ಮೇಡಾ ನೂತನ ಸ್ವಂತ ಕಟ್ಟಡ ಉದ್ಘಾಟನೆ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 12 ಶಾಖೆಗಳನ್ನು ಹೊಂದಿದ್ದು, ಈಗಾಗಲೇ 5 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳು ಸ್ವಂತ ಕಟ್ಟಡ ನಿರ್ಮಾಣಕ್ಕೆ ಗುರಿ ಹಾಕಿಕೊಂಡಿದೆ. ಶಿರ್ವ ಭಾಗದ ಸಾರ್ವಜನಿಕರು ಸಂಸ್ಥೆಯ ಸೇವೆಯನ್ನು ಪಡೆದುಕೊಳ್ಳಬೇಕು ಎಂದರು.
ಶಿರ್ವದ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಲೆಸ್ಲಿ ಸಿ. ಡಿಸೋಜ ಆಶೀರ್ವಚನ ಗೈದರು.
ಶಾಖೆಯ ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನೆರವೇರಿಸಿ “ಸಮಾಜದಲ್ಲಿ ಸಮಾನತೆ ಅತಿ ಮುಖ್ಯ, ಜಾತಿ ಮತ ಭೇದವಿಲ್ಲದೆ ತಾಳ್ಮೆಯಿಂದ ಸಹನೆಯಿಂದ ಎಲ್ಲರೂ ಸಂತೋಷದಿಂದ ಸಹಬಾಳ್ವೆ ನಡೆಸಬೇಕು, ಜೀವನದಲ್ಲಿ ಮಾನವ ಧರ್ಮ ಮುಖ್ಯವಾದುದು, ಇದನ್ನು ಅರಿತು ನಾವು ನಡೆಯಬೇಕು” ಎಂದು ಹೇಳಿದ ಅವರು, “ಈ ಸಂಸ್ಥೆ ಮುಂದಿನ ದಿನಗಳಲ್ಲಿ 24 ಶಾಖೆಗಳಾಗಲಿ” ಎಂದು ಶುಭ ಹಾರೈಸಿದರು.
ಗಣಕಯಂತ್ರ ವಿಭಾಗವನ್ನು ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕರಾದ ವಾಲ್ಟರ್ ನಂದಳಿಕೆ ಅವರು ಉದ್ಘಾಟಿಸಿ, ಸಹಕಾರ ಕ್ಷೇತ್ರದಲ್ಲಿ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉತ್ತಮ ಹೆಸರು ಗಳಿಸಿದೆ. ಇನ್ನೂ ಹೆಚ್ಚಿನ ಸೇವೆಯನ್ನು ನೀಡಲಿ, ಇನ್ನೂ ಉನ್ನತಿಯ ಪಥಕ್ಕೆರಲಿ ಎಂದರು.
ಶಿಲಾನ್ಯಾಸ ಫಲಕದ ಉದ್ಘಾಟನೆಯನ್ನು ಸಂಘದ ಹಿರಿಯ ನಿರ್ದೇಶಕರಾದ ಫಿಲಿಪ್ ಡಿ ಕೋಸ್ಟ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶಿರ್ವ ಪರಿಸರದ ಪ್ರತಿಭಾವಂತ ಏಳು ವಿದ್ಯಾರ್ಥಿಗಳಿಗೆ ಗುರುತಿಸಿ ಪ್ರೋತ್ಸಾಹಧನವನ್ನು ನೀಡಲಾಯಿತು. ಹಲವು ರೀತಿಯ ಸಂಘ ಸಂಸ್ಥೆಗಳಿಗೆ, ಮುಖಂಡರಿಗೆ, ಉದ್ಯಮಿಗಳಿಗೆ, ರಿಕ್ಷಾ ಚಾಲಕ ಮಾಲಕರಿಗೆ, ಸ್ಥಳೀಯ ಪಂಚಾಯತ್ ಅಧಿಕಾರಿ ವರ್ಗದವರಿಗೆ ಹೀಗೆ ಸುಮಾರು 65 ಸಂಘಟನೆಯ ಮುಖಂಡರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.
ಶಾಖೆಯ ನಿರ್ದೇಶಕ ಹಾಗೂ ಶಾಖಾ ಸಭಾಪತಿ ವಿಲ್ಸನ್ ಡಿಸೋಜ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಕಿರಣ್ ಲೋಬೊ ಅತಿಥಿಗಳನ್ನು ಗೌರವಿಸಿದರು. ಆಲ್ವಿನ್ ದಾಂತಿಯರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೆಬಲ್ ಡಿ ಅಲ್ಮೇಡಾ ವಂದಿಸಿದರು.















