

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಇಬ್ಬರು ಅಭ್ಯರ್ಥಿಗಳಾದ ಫಾ. ಓಸ್ವಲ್ಡ್ ವಾಸ್ (ಹಿರ್ಗಾನ) ಮತ್ತು ಫಾ. ರೋಹನ್ ಮಸ್ಕರೇನ್ಹಸ್ (ಕೆಂಲ್ಬೆಟ್ ಬೋಳ) ಅವರಿಗೆ ಗುರು ದೀಕ್ಷೆಯನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಬಿಷಪ್ ಲೋಬೊ, ಕ್ರೈಸ್ತ ಧರ್ಮಗುರು ದೇವರ ವ್ಯಕ್ತಿಯಾಗಿದ್ದು, ದೇವರ ಹಾಗೂ ಜನರ ಪ್ರೀತಿಗೆ ಪಾತ್ರರಾದವರಾಗಿರುತ್ತಾರೆ. ಜನರಿಂದ ಜನರಿಗಾಗಿ ಧರ್ಮಗುರುವಾಗಿ ದೇವರು ಆಯ್ಕೆ ಮಾಡಿದ ವ್ಯಕ್ತಿ ಅವರಾಗಿರುತ್ತಾರೆ. ದೇವರ ವಾಕ್ಯವನ್ನು ಜಗತ್ತಿಗೆ ಸಾರುವ ಉನ್ನತ ಜವಾಬ್ದಾರಿಯೊಂದಿಗೆ ಕ್ರೈಸ್ತ ಧರ್ಮಗುರುವಿನ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಪ್ರಾಂತ್ಯಕ್ಕೆ ಹೊಸ ಧರ್ಮಗುರುವನ್ನು ನೀಡಿದ ಕುಟುಂಬ ವರ್ಗವನ್ನು ಶ್ಲಾಘಿಸಿ ದರು. ಕ್ರೈಸ್ತ ಕುಟುಂಬಗಳಿಗೆ ಹೆಚ್ಚಿನ ಯುವಕರು ಧರ್ಮ ಗುರುಗಳಾಗಲು ಮುಂದೆ ಬರುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡ ಬೇಕು ಎಂದು ಕರೆ ನೀಡಿದರು.
ಸಂಭ್ರಮದ ಬಲಿಪೂಜೆಯಲ್ಲಿ ಪವಿತ್ರಾತ್ಮನ ಆಗಮನಕ್ಕಾಗಿ ಧರ್ಮಾಧ್ಯಕ್ಷರ ಜೊತೆ ಸೇರಿದ ಎಲ್ಲಾ ಧರ್ಮಗುರುಗಳೂ ತಮ್ಮ ಕರಗಳನ್ನು ನವ ಧರ್ಮಗುರು ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ನಂತರ ಕ್ರೈಸ್ತ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ನವ ಧರ್ಮಗುರುವಿನ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸದರು.
ಕುಲಪತಿ ವಂ|ಸ್ಟೀವನ್ ಡಿ’ಸೋಜಾ, ಜುಡಿಶಿಯಲ್ ವಿಕಾರ್ ವಂ|ಡಾ|ರೋಶನ್ ಡಿಸೋಜಾ, ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದ ನಿರ್ದೇಶಕ ವಂ|ಆಲ್ಬನ್ ಡಿಸೋಜಾ, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೊ, ಆಧ್ಯಾತ್ಮಿಕ ನಿರ್ದೇಶಕ ವಂ|ರೋಮನ್ ಮಸ್ಕರೇನ್ಹಸ್, ಉಡುಪಿ ವಲಯ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಶಿರ್ವ ವಲಯ ಪ್ರಧಾನ ಧರ್ಮಗುರು ವಂ|ಡಾ|ಲೆಸ್ಲಿ ಡಿಸೋಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಪಾವ್ಲ್ ರೇಗೊ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಹಾಗೂ ವಿವಿಧ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ನೂತನ ಧರ್ಮಗುರುಗಳನ್ನು ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಧರ್ಮಪ್ರಾಂತ್ಯದ ಪರವಾಗಿ ಅಭಿನಂದನಾ ನುಡಿಗಳನ್ನಾಡಿ ಸನ್ಮಾನಿಸಲಾಯಿತು.
ಗುರುದೀಕ್ಷೆಯ ಪವಿತ್ರ ವಿಧಿ ವಿಧಾನದ ನೇತೃತ್ವನ್ನು ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ವಂ|ವಿಲ್ಸನ್ ಡಿಸೋಜಾ ವಹಿಸಿದ್ದರು.
ವಂ|ರೋಹನ್ ಎಡ್ವರ್ಡ್ ಮಸ್ಕರೇನ್ಹಸ್ ಅವರು ಕಾರ್ಕಳ ತಾಲೂಕಿನ ಕೆಲ್ಬೆಂಟ್ ಬೋಳ ಸಂತ ಜೋನ್ ಬೊಸ್ಕೊ ಚರ್ಚಿನ ರೋಬರ್ಟ್ ಮತ್ತು ಎವ್ಲಿನ್ ಮಸ್ಕರೇನಸ್ ಅವರ ಪುತ್ರರಾಗಿದ್ದು, ವಂ|ಓಸ್ವಲ್ಡ್ ವಾಸ್ ಅವರು ಹಿರ್ಗಾನ ಮರಿಯ ಗೊರೆಟ್ಟಿ ಚರ್ಚಿನ ಅಬ್ರಾಹಾಂ ಮತ್ತು ವೇರಿ ವಾಸ್ ಅವರ ಪುತ್ರರಾಗಿರುತ್ತಾರೆ.








