

ಶ್ರೀನಿವಾಸಪುರ: ಬೆಂಗಳೂರು ಅರಮನೆ ಮೈದಾನದಲ್ಲಿ ಬಹುಭವ್ಯವಾಗಿ ನಡೆದ ರಾಜ್ಯಮಟ್ಟದ ಡಿಜಿ ಇಮೇಜ್ ವಸ್ತು ಪ್ರದರ್ಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜನಸಾಗರದ ನಡುವೆ ಅದ್ಧೂರಿಯಾಗಿ ನೆರವೇರಿತು. ರಾಜ್ಯದ ಮೂಲೆಮೂಲೆಗಳಿಂದ ಆಯ್ಕೆಗೊಂಡ ಪ್ರತಿಭಾನ್ವಿತ ಛಾಯಾಗ್ರಾಹಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಹೆಮ್ಮೆಮಯ ಸಂದರ್ಭದಲ್ಲಿ ಶ್ರೀನಿವಾಸಪುರ ಪಟ್ಟಣದ ಹೆಸರನ್ನು ಉಜ್ವಲಗೊಳಿಸಿದವರು ಶ್ರೀ ವಿನಾಯಕ ಡಿಜಿಟಲ್ ಸ್ಟುಡಿಯೋ (ಎಸ್ ಬಿ ಐ ಬ್ಯಾಂಕ್ ಹತ್ತಿರ, ಎಂ.ಜಿ.ರಸ್ತೆ ) ಇದರ ಮಾಲಿಕ ವೇಣುಗೋಪಾಲ ರೆಡ್ಡಿ. ತಮ್ಮ ದೀರ್ಘಕಾಲದ ಛಾಯಾಗ್ರಹಣ ಸೇವೆ, ಕಲಾತ್ಮಕ ದೃಷ್ಟಿಕೋನ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿಭಾಯಿಸಿದ ಪಾತ್ರದ ಹಿನ್ನಲೆಯಲ್ಲಿ ಅವರಿಗೆ ‘ಛಾಯ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಾಗೇಶ್ ಅವರು ಸ್ವತಃ ವೇಣುಗೋಪಾಲ ರೆಡ್ಡಿಗೆ ಹಸ್ತಾಂತರಿಸಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಕಲಾವಿದರು ಮತ್ತು ಛಾಯಾಗ್ರಾಹಕ ಸಹೋದರರು ಭಾಗವಹಿಸಿದ್ದರು.
ಸ್ಥಳೀಯವಾಗಿ ಕೂಡಾ ಈ ಸುದ್ದಿ ಸಂಭ್ರಮ ಸೃಷ್ಟಿಸಿದ್ದು, ಶ್ರೀನಿವಾಸಪುರದ ಛಾಯಾಗ್ರಹಣ ಕ್ಷೇತ್ರಕ್ಕೆ ಹೊಸ ಪ್ರೇರಣೆಯಾಗಿದೆ. ನಗರದ ನೂರಾರು ಗ್ರಾಹಕರಿಗೆ ತನ್ನ ನಿಸ್ವಾರ್ಥ ಸೇವೆಯಿಂದ ಮೆಚ್ಚುಗೆ ಪಡೆದ ವೇಣುಗೋಪಾಲ ರೆಡ್ಡಿ ಅವರು, ಈ ಸಾಧನೆಗೆ ಪ್ರೇರಣೆಯಾಗಿ ನಿಂತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಈ ಸಾಧನೆಯು ಯುವ ಛಾಯಾಗ್ರಾಹಕರಿಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.