

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಜಂಗಮ ಗುರ್ಜೆನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಸೀಗೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್.ಧರ್ಮೇಶ್ ಉದ್ಘಾಟಿಸಿದರು.
ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರ ಪಾತ್ರ ಹಿರಿದು – ಎಸ್.ಆರ್.ಧರ್ಮೇಶ್
ಶ್ರೀನಿವಾಸಪುರ: ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರ ಪಾತ್ರ ಹಿರಿದು. ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುವ ಭಾರತೀಯ ಪರಂಪರೆ ಮುಂದುವರಿಯಬೇಕು ಎಂದು ಸೀಗೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.
ಜಂಗಮ ಗುರ್ಜೆನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಾನ ಮಾಡುವವರು ದಿವಂಗತ ಚಿತ್ರ ನಟ ಪುನಿತ್ ರಾಜ್ಕುಮಾರ್ ಅವರ ಮಾದರಿ ಅನುಸರಿಸಬೇಕು. ಮಕ್ಕಳ ಪುಟ್ಟ ಕೈಗಳಿಗೆ ಶಕ್ತಿ ತುಂಬುವ ಕಾರ್ಯ ನಿರಂತರವಾಗಿ ನಡೆಯಬೇಕು. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಿಆರ್ಪಿ ವಿ.ರೂಪ ಮಾತನಾಡಿ, ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಮಹಿಳೆಯರನ್ನು ಗೌರವಿಸುವ ಸಂಪ್ರದಾಯ ನಮ್ಮ ಹಿರಿಯರಿಂದ ಬಂದ ಬಳುವಳಿಯಾಗಿದೆ. ಗ್ರಾಮೀಣ ಮಹಿಳೆಯರು ತಮ್ಮ ಎಡೆಬೆಡದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಮನೋವಿಕಾಸಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ತಾವು ದೂರದರ್ಶನ ಹಾಗೂ ಮೊಬೈಲ್ನಿಂದ ದೂರವಿದ್ದು ಮಕ್ಕಳನ್ನು ಅವುಗಳ ಗೀಳಿನಿಂದ ಪಾರುಮಾಡಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರೇಗೌಡ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕ ಎಸ್.ಆರ್.ಧರ್ಮೇಶ್ ತಮ್ಮ ಸಂಬಳದ ಸಿಂಹ ಪಾಲನ್ನು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಸಮಾಜ ಸೇವಾ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಅವರ ಸಲಹೆಯಂತೆ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಶಾಲಾ ಮಕ್ಕಳ ತಾಯಂದಿರು ಹಾಗೂ ಶಾಲಾ ಮಹಿಳಾ ಸಿಬ್ಬಂದಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ಲೋಕೇಶ್ ಶಾಲೆಗೆ ಟಿವಿ ನೀಡಿದರು. ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ಮಹಿಳೆಯರಿಗೆ ದಾನಿ ಧರ್ಮೇಶ್ ಬಹುಮಾನಗಳನ್ನು ವಿತರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಕ ಸತ್ಯನಾರಾಯಣ, ಗ್ರಾಮದ ಮಹಿಳೆಯರು ಹಾಗೂ ಶಾಲಾ ಸಿಬ್ಬಂದಿ ಇದ್ದರು.