

ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಶನಿವಾರ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಸಾಹಿತಿ ಆರ್.ಚೌಡರೆಡ್ಡಿ, ಪತ್ನಿ ಬಿ.ವಿ.ಸುಗುಣ ಅವರನ್ನು ಸನ್ಮಾನಿಸಲಾಯಿತು.
ಸಾಹಿತ್ಯ ಸಮಾಜ ಕಟ್ಟುವ ಸಾಧನವಾಗಬೇಕು – ಆರ್.ಚೌಡರೆಡ್ಡಿ
ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶನಿವಾರ, ಸಾಹಿತಿಗಳ ಸಂಪರ್ಕ ಅಭಿಯಾನ ಕಾರ್ಯಕ್ರಮದಡಿ ಜಿಲ್ಲೆಯ ಹಿರಿಯ ಸಾಹಿತಿ ಆರ್.ಚೌಡರೆಡ್ಡಿ ಅವರನ್ನು ಸನ್ಮಾನಿಸಿ ಸಂವಾದ ನಡೆಸಲಾಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಸಾಹಿತಿ ಎನ್.ಶಂಕರೇಗೌಡ, ಸಾಹಿತಿ ಆರ್.ಚೌಡರೆಡ್ಡಿ ಅವರ ಸಾಹಿತ್ಯ ಕುರಿತು ಕಿರು ಪರಿಚಯ ಮಾಡಿ, ಪರಿಸರ ಪ್ರೇಮಿಯಾದ ಆರ್.ಚೌಡರೆಡ್ಡಿ, ಮಾವಿನ ಮಡಿಲು ಎಂದು ಖ್ಯಾತವಾಗಿರುವ ಶ್ರೀನಿವಾಸಪುರ ತಾಲ್ಲೂಕಿನ ಸಸ್ಯ ಹಾಗೂ ಜೀವ ಜಗತ್ತಿನ ವೈವಿಧ್ಯತೆಯನ್ನು ತಮ್ಮ ಲೇಖನಗಳಲ್ಲಿ ಹಿಡಿದಿಟ್ಟಿದ್ದಾರೆ. ಮಣ್ಣಿನ ವಾಸನೆಯಿಂದ ಕೂಡಿರುವ ಅವರ ಲೇಖನಗಳಲ್ಲಿ ಪರಿಸರ ಕಾಳಜಿ, ಸಾಂಸ್ಕøತಿಕ ಪರಂಪರೆಯ ಸೊಗಡು ಹಾಗೂ ಕೃಷಿ ಕ್ಷೇತ್ರದ ಏಳುಬೀಳು ಪ್ರಧಾನವಾಗಿ ಕಂಡುಬರುತ್ತದೆ. ಅವರ ಕತೆ, ಕಾವ್ಯ, ಕಾದಂಬರಿಗಳಲ್ಲಿ ಸಮಾಜ ಮುಖಿ ಧೋರಣೆ ಬಿಂಗಿತವಾಗಿದೆ ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಲೇಖಕಿ ಮಾಯಾ ಬಾಲಚಂದ್ರ ಮಾತನಾಡಿ, ಜೂನ್ 7 ಮತ್ತು 8 ರಂದು ದಾವಣಗೆರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ನಾಲ್ಕನೇ ಅಧಿವೇಶನ ಏರ್ಪಡಿಸಲಾಗಿದೆ. ಭಾಗವಹಿಸಲು ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರನ್ನು ಆಹ್ವಾನಿಸಲಾಗುತ್ತಿದೆ. ಸಾಂಕೇತಿಕವಾಗಿ ಹಿರಿಯ ಸಾಹಿತಿ ಆರ್.ಚೌಡರೆಡ್ಡಿ ಅವರನ್ನು ಸನ್ಮಾನಿಸಿ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಪಿ.ಎಸ್.ಮಂಜುಳ ಮಾತನಾಡಿ, ಸಾಹಿತಿ ಆರ್.ಚೌಡರೆಡ್ಡಿ ಅವರ ಸರಳತೆ ಹಾಗೂ ಸಜ್ಜನಿಕೆ ಮಾದರಿಯಾಗಿದೆ. ತಾಲ್ಲೂಕಿನಲ್ಲಿ ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳುವಾಗ ಅವರ ಸಲಹೆ ಪಡೆಯಲಾಗುತ್ತಿದೆ. ಅವರ ಭಾವಗೀತೆಗಳು ಸಂಗೀತ ಪ್ರಿಯರ ಗಮನ ಸೆಳೆಯುತ್ತವೆ. ಕನ್ನಡ ಪರ ಸಂಘಟನೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿವೆ. ಗಡಿ ಪ್ರದೇಶದಲ್ಲಿ ಕನ್ನಡ ಪರಿಸರ ಉಂಟುಮಾಡಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಾಹಿತಿ ಆರ್.ಚೌಡರೆಡ್ಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಹಿತ್ಯ ಸಮಾಜವನ್ನು ಕಟ್ಟುವ ಸಾಧನವಾಗಬೇಕು. ಆ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಘಟಕಗಳು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಮಾಜದ ಒಳಿತಿಗಾಗಿ ಸಾಹಿತ್ಯ ರಚಿಸುವುದನ್ನು ಪ್ರೋತ್ಸಾಹಿಸುತ್ತಿವೆ. ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುತ್ತಿದೆ ಎಂದು ಹೇಳಿದರು.
ಪರಷತ್ತು ಶಾಲಾ ಕಾಲೇಜುಗಳಲ್ಲಿ ಕವಿಗಳ, ದಾರ್ಶನಿಕರ ಹಾಗೂ ಸಂತರ ಹಾಗೂ ದಾಸರ ಜಯಂತಿಗಳನ್ನು ಆಚರಿಸುತ್ತಿದೆ. ಸಾಹಿತಿ ಹಾಗೂ ಸಾಹಿತ್ಯ ಪರಿಚಯ, ಕಾವ್ಯ, ಕಥಾ ವಾಚನ ಹಾಗೂ ವಿಮರ್ಶಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತಿದೆ. ಅಭಿನಯ ತರಬೇತಿ ನೀಡಿ ನಾಟಕ ಪ್ರದರ್ಶನಗಳನ್ನು ಏರ್ಪಡಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸಲು ಧೈರ್ಯ ತುಂಬುತ್ತಿದೆ. ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಷತ್ತಿನ ದಾವಣಗೆರೆ ಸಮಾವೇಶದಲ್ಲಿ ಭಾಗವಹಿಸುವುದರ ಮೂಲಕ ಭಾರತೀಯ ಸಾಹಿತ್ಯ ಪರಂಪರೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಮಹಿಳಾ ಮಾಣಿಕ್ಯ ಪ್ರಶಸ್ತಿ ಪಡೆದ ಲೇಖಕಿ ಹಾಗೂ ಸಂಗೀತ ವಿದುಷಿ ಮಾಯಾ ಬಾಲಚಂದ್ರ ಅವರನ್ನು ಬೇರೆ ಬೇರೆ ಕನ್ನಡ ಪರ ಸಂಘಟನೆಗಳು ಹಾಗೂ ಸಾಹಿತ್ಯ ಪ್ರಿಯರಿಂದ ಸನ್ಮಾನಿಸಲಾಯಿತು.
ಕವಿಗಳಾದ ಅರುಣ್ ಕುಮಾರ್, ಕೆ.ವೇಣುಗೋಪಾಲ್, ಮಮತಾರಾಣಿ, ಜಿ.ಕೆ.ನಾರಾಯಣಸ್ವಾಮಿ, ಚಂದ್ರಶೇಖರ್, ಲಕ್ಷ್ಮೀಗೌಡ, ಚಿಕ್ಕರೆಡ್ಡಮ್ಮ, ಗೀತಾ, ಆರತಿ, ಸಂವಾದ ರ್ಕಾಕ್ರಮದಲ್ಲಿ ಭಾಗವಹಿಸಿದ್ದರು.