

ಶ್ರೀನಿವಾಸಪುರ; ಕಟ್ಟೆಕೆಳಗಿನ ಪಾಳ್ಯದಲ್ಲಿ ಬುಧವಾರ ಏರ್ಪಡಿಸಿದ್ದ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿ ಇ ಖಾತಾ ಅಭಿಯಾನ ಪ್ರಯೋಜನ ಪಡೆಯಿರಿ ಎಂದು ತಿಳಿಸಿ, ನಾಗರಿಕರು ಪುರಸಭೆ ವತಿಯಿಂದ ನಡೆಸಲಾಗುತ್ತಿರುವ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಮನೆ ಹಾಗೂ ನಿವೇಶನಗಳಿಗೆ ಇ ಖಾತೆ ಪಡೆದುಕೊಳ್ಳಬೇಕು ಎಂದು ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಹೇಳಿದರು.
ಪಟ್ಟಣದ ಕಟ್ಟೆಕೆಳಗಿನ ಪಾಳ್ಯದಲ್ಲಿ ಬುಧವಾರ ಏರ್ಪಡಿಸಿದ್ದ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನಾಗರಿಕರ ಹಿತದೃಷ್ಟಿಯಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಇ ಖಾತೆ ಇಲ್ಲದೆ ಪರಿತಪಿಸುತ್ತಿದ್ದ ನಾಗರಿಕರಿಗೆ ಈ ಕಾರ್ಯಕ್ರಮ ವರದಾನವಾಗಿದೆ. ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಖಾತೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ ಮಾತನಾಡಿ, ಇ ಖಾತೆ ಮಾಡಿಕೊಡಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವುದು ಕಷ್ಟದ ಕೆಲಸವಲ್ಲ. ಫಲಾನುಭವಿಯ ಆಧಾರ್ ಕಾರ್ಡ್, ಕ್ರಯಪತ್ರ, ಫಲಾನುಭವಿ ಮನೆಯ ಮುಂದೆ ನಿಂತಿರುವ ಫೋಟೋ, ಫಲಾನುಭವಿಯ ಭಾವಚಿತ್ರ, ಉಪ ನೋಂದಣಾಧಿಕಾರಿಯಿಂದ ಪಡೆದ ಋಣಭಾರ ರಾಹಿತ್ಯ ಪ್ರಮಾಣ ಪತ್ರ, ಕಂದಾಯ ಕಟ್ಟಿದ ರಸೀದಿಯನ್ನು ಸಲ್ಲಿಸಿದರೆ ಸಾಕು ಎಂದು ಹೇಳಿದರು.
ಪುರಸಭಾ ಸದಸ್ಯರಾದ ಎನ್.ಎನ್.ಆರ್.ನಾಗರಾಜ್, ಕಂದಾಯ ಅಧಿಕಾರಿ ಎಂ.ಶಂಕರ್, ಹೇಮಂತ್ ಕುಮಾರ್, ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು, ಪುರಸಭೆ ಸಿಬಂದಿ ನಾಗೇಶ್, ಸುರೇಶ್, ಸಂತೋಷ್, ಗೌತಮ್, ಶಿವಪ್ರಸಾದ್ ಇದ್ದರು.