![](https://jananudi.com/wp-content/uploads/2025/02/Screenshot-946-4.png)
![](https://jananudi.com/wp-content/uploads/2025/02/WhatsApp-Image-2025-02-13-at-6.46.53-PM.jpg)
ಕೋಲಾರ : ಪತ್ರಕರ್ತನಾದವನು ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು ಹಾಗೂ ವಿಷಯದಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಪರಾಮರ್ಷೆ ಮಾಡುತ್ತಿರಬೇಕು ಎಂದು ಮಾನ್ಯ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ಕೋಲಾರ ಪತ್ರಿಕೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕೋಲಾರ ಪತ್ರಿಕೆ ಸುವರ್ಣ ಸಂಭ್ರಮದ ಅಂಗವಾಗಿ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಇಂದು-ಮುಂದು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕೋದ್ಯಮವು ವಿಶ್ವಾಸಾರ್ಹ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು. ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕವಾಗಿದ್ದು, ಕಳವಳಕಾರಿಯಾಗಿ ಬೆಳೆಯುತ್ತಿದೆ. ಕರೋನ ನಂತರದಲ್ಲಿ ಪತ್ರಿಕೋದ್ಯಮ ಇತ್ತೀಚಿಗೆ ಚೇತರಿಸಿಕೊಳ್ಳುತ್ತಿದೆ. ಮುದ್ರಣ ಮಾಧ್ಯಮಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದ ಹೊರತಾಗಿಯೂ, ವಿಶ್ವಾಸಾರ್ಹ ಸುದ್ದಿಗಳನ್ನು ನೀಡುವಲ್ಲಿ ಹಾಗೂ ಓದುಗರ ಮನಗೆಲ್ಲುವಲ್ಲಿ ಮೇಲುಗೈ ಸಾಧಿಸಿದೆ. ಇದರೊಂದಿಗೆ ಮುದ್ರಣ ಮಾಧ್ಯಮದ ಆಧಾಯವೂ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಅಧ್ಯಯನಶೀಲರಾಗಿರಬೇಕು. ಜೀವನದಲ್ಲಿ ಅಧ್ಯಯನಶೀಲತೆಯನ್ನು ರೂಡಿಸಿಕೊಳ್ಳಬೇಕು. ಸುದ್ದಿ ಮಾಡುವ ಮುನ್ನ ಮರುಪರಿಶೀಲನೆ ಮಾಡಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಬ್ಬರನ್ನು ಪ್ರಶ್ನಿಸುವ ಮುನ್ನ, ಆ ವಿಷಯದ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಂಡಿರಬೇಕು ಎಂದರು.
ಪ್ರಸ್ತುತ ಮಾನ್ಯ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಾದಗ ನಾನು ಮಾದ್ಯಮ ಸಲಹೆಗಾರರಾದ ನಂತರ ಕೋಲಾರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸುಮಾರು 25 ಲಕ್ಷ ರೂಪಾಯಿ ಗಳನ್ನು ಕಲ್ಯಾಣ ನಿಧಿಗೆ ಕೊಡಿಸಿದ್ದೇವೆ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಮುಂದಿನ ದಿನಗಳಲ್ಲಿ ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಉತ್ತಮವಾದ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ವಿ ಗೋಪಿನಾಥ್ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಯಾವುದೇ ಕೆಲಸ ಸಿಗಲಿಲ್ಲ, ಅಂದರೆ ಒಂದು ಶಿಕ್ಷಕರಾಗಿ ಇಲ್ಲದಿದ್ದರೆ ಪತ್ರಕರ್ತರಾಗಿ ಅನ್ನುವ ಕಾಲವಿತ್ತು ಆದರೆ ಪ್ರಸ್ತುತ ಶಿಕ್ಷಕರಿಗೆ ಮತ್ತು ಪತ್ರಕರ್ತರಿಗೆ ಯಾವುದೇ ದಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದೇವೆ.
ಯುವ ಪತ್ರಕರ್ತರಿಗೆ ಕಲಿಯುವ ಆಸಕ್ತಿ ಇಲ್ಲ ಬೆಳೆಯುವ ಆಸಕ್ತಿ ಇದೆ ಪತ್ರಕರ್ತನ ಕಲಿಯುವ ವಿಚಾರ ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ.
ಪತ್ರಕರ್ತರಿಗೆ ಮಾದರಿಯಾದ ಕೆವಿ ಪ್ರಭಾಕರ್ ಅವರು ಇಂದು ರಾಜ್ಯಕ್ಕೆ ಮನೆಯ ಮಗನಾಗಿದ್ದಾರೆ. ಎಲ್ಲಾ ಪತ್ರಕರ್ತರಿಗೂ ಸರ್ಕಾರದಿಂದ ಸಿಗಬೇಕಾದಂತಹ ಸೌಲಭ್ಯಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಾರದಲ್ಲಿ ಪತ್ರಿಕೆಗಳನ್ನು ವಿತರಣೆ ಮಾಡುವ ವೃತ್ತಿಯಿಂದ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಅವರು ಇಂದು ರಾಜ್ಯದ ಮುಖ್ಯ ಮಂತ್ರಿಗಳ ಮಾದ್ಯಮ ಸಲಹೆಗಾರರಾಗಿ ಕಾರ್ಯವನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ಮುಂದಿನ ಪೀಳಿಗೆಗೆ ವೃತ್ತಿ ರಂಗದಲ್ಲಿ ಬೆಳೆಯುವ ಅವಕಾಶಕ್ಕೆ ಆದರ್ಶವಾಗಿದೆ. ವಿದ್ಯಾರ್ಥಿಗಳು ಇಂತಹ ವ್ಯಕ್ತಿಗಳನ್ನು ಆದರ್ಶವಾಗಿ ತೆಗೆದುಕೊಂಡು ತಮ್ಮ ಮುಂದಿನ ಪತ್ರಿಕೋದ್ಯಮ ಜೀವನದಲ್ಲಿ ಶಿಸ್ತು ಮತ್ತು ಪತ್ರಿಕಾ ಧರ್ಮವನ್ನು ಒಳಗೊಂಡು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು .
ಕೋಲಾರ ಜಿಲ್ಲೆಯ ಪತ್ರಕರ್ತರ ಕಲ್ಯಾಣ ನಿಧಿಗೆ 25 ಲಕ್ಷ ರೂಪಾಯಿಗಳನ್ನು ಮಾನ್ಯ ಮುಖ್ಯಮಂತ್ರಿಗಳ ನಿಧಿಯಿಂದ ಕೊಡಿಸಿದ್ದಾರೆ ಮತ್ತು ಜಿಲ್ಲೆಯ ಪತ್ರಕರ್ತರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯರಾದ ಕೆ.ಎಸ್.ಗಣೇಶ್ ಅವರು ಮಾತನಾಡಿ ಪತ್ರಕರ್ತರ ಹಳೆಯ, ಹೊಸ ಹಾಗೂ ಮುಂಬರುವ ತಲೆಮಾರುಗಳ ಅಪೂರ್ವ ಸಂಗಮ ಇದಾಗಿದೆ. ಜಿಲ್ಲೆಯ ಜನಪರ ಆಂದೋಲನಗಳು, ಕೆರೆಗಳು, ಜಿಲ್ಲೆಯ ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವಿಗೆ ತಮ್ಮ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನಗಳನ್ನು ಬರೆದು ಸ್ಥಳೀಯ ಪತ್ರಿಕೆಯಾಗಿ ಗಟ್ಟಿಯಾಗಿ ನೆಲೆಯೂರಿದ ಹಾಗೂ ನೆಲೆಯೂರುವಂತೆ ಮಾಡಿದ ಕೋಲಾರ ಪತ್ರಿಕೆ ಹಾಗೂ ಕೆ.ಪ್ರಹ್ಲಾದರಾವ್ ರವರು ಪತ್ರಿಕೆ ಹಾಗೂ ಸಂಪಾದಕರು ಒಬ್ಬರಿಂದೊಬ್ಬರು ಬೆಸೆದುಕೊಂಡಿರುವುದು ಒಂದು ಪತ್ರಿಕೆಯ ಸುದೀರ್ಘ ಅವಧಿಯ ಪ್ರಕಟಣೆಗೆ ಹಾಗೂ ಯಶಸಿಗೆ ಕಾರಣವಾಗಿದೆ ಎಂದರು.
ಜಿಲ್ಲಾ ಮಟ್ಟದ ಒಂದು ಪತ್ರಿಕೆಯೂ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಮಾದರಿಯಾಗುವಂತೆ ಪ್ರಕಟಗೊಳ್ಳುತ್ತಿರುವ ಕೋಲಾರ ಪತ್ರಿಕೆಯೂ ಮುಂದಿನ 50 ವರ್ಷಗಳಲ್ಲಿ ಮತ್ತಷ್ಟು ಮಗದಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಏಳಿಗೆಯನ್ನು ಸಾಧಿಸಬೇಕು ಎಂದು ಆಶಿಸಿದರು.
ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಅವರು ಮಾತನಾಡಿ ಮಾಧ್ಯಮ ಸಲಹೆಗಾರರ ಪ್ರೀತಿಯ ಒತ್ತಾಯದ ಮೆರೆಗೆ ಹಾಗೂ ನನ್ನ ಜೀವಮಾನದ ಪತ್ರಿಕೋದ್ಯಮ ಸೇವೆಯನ್ನು ಗುರುತಿಸಿ ನನಗೆ ಈ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ. ಈ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳು ಇಂದು
ಮತ್ತು ಮುಂದಿನ ಪತ್ರಿಕೋದ್ಯಮದ ಅಧ್ಯಯನವನ್ನು ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಯ ಪ್ರಚಾರ ಭರಾಟೆ ಜೋರಾಗಿದ್ದು, ಅಕಾಡೆಮಿಯು ಸುಳ್ಳು ಸುದ್ದಿಗಳನ್ನು ತಡೆಯಲು ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯುವ ಪತ್ರಕರ್ತರು ಇಂತಹ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರವು ಪತ್ರಿಕೋದ್ಯಮ ಅಭ್ಯಸಿಸುವ ಕಾಲೇಜುಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಒದಗಿಸಬೇಕು. ಅಂತೆಯೇ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಹಾಗೂ ಪತ್ರಿಕಾ ಧರ್ಮವನ್ನು ತಪ್ಪದೇ ಪಾಲಿಸಬೇಕು. ಯುವ ಜನತೆ ಈ ಕ್ಷೇತ್ರದಲ್ಲಿ ಹೆಚ್ಚು-ಹೆಚ್ಚು ಸಾಧನೆ ಮಾಡಬೇಕು ಎಂದು ತಿಳಿಸಿದರು.
![](https://jananudi.com/wp-content/uploads/2025/02/WhatsApp-Image-2025-02-13-at-6.46.54-PM-1.jpg)
![](https://jananudi.com/wp-content/uploads/2025/02/WhatsApp-Image-2025-02-13-at-6.46.54-PM-2.jpg)
![](https://jananudi.com/wp-content/uploads/2025/02/WhatsApp-Image-2025-02-13-at-6.46.54-PM.jpg)
![](https://jananudi.com/wp-content/uploads/2025/02/WhatsApp-Image-2025-02-13-at-6.46.55-PM.jpg)