![](https://jananudi.com/wp-content/uploads/2025/02/Screenshot-946-1.png)
![](https://jananudi.com/wp-content/uploads/2025/02/WhatsApp-Image-2025-02-08-at-11.43.55-AM.jpg)
ಶ್ರೀನಿವಾಸಪುರ : ಯದರೂರು ಹಾಗು ಸುತ್ತಮುತ್ತಲ ಗ್ರಾಮಗಳ ರೈತ ಕೂಲಿಕಾರರ ಕೃಷಿ ಭೂಮಿಯನ್ನು ಸುಲಭವಾಗಿ ಕಾರ್ಪೊರೇಟ್ ಉದ್ಯಮಿಗಳ ವಶಕ್ಕೆ ನೀಡಲು ಕೆಐಎಡಿಬಿ ಹೆಸರಿನಲ್ಲಿ ವಶಕ್ಕೆ ಪಡೆದುಕೊಳ್ಳುತ್ತಿರುವುದು ದುರದೃಷ್ಟಕರ ಹಾಗೂ ಆತಂಕದ ವಿಷಯವಾಗಿದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತೂರು ನವೀನ್ ಆರೋಪಿಸಿದರು.
ಶ್ರೀನಿವಾಸಪುರ ತಾಲೂಕಿನ ಯದರೂರು ರೈತ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡುತ್ತಾ ರಾಜ್ಯಾದ್ಯಂತ ಕೈಗಾರಿಕೆಗೆ ಎಂದು ಭೂ ಸ್ವಾಧೀನ ಪ್ರಕ್ರಿಯ ಮೂಲಕ ವಶಕ್ಕೆ ತೆಗೆದುಕೊಂಡು ಹತ್ತಾರು ವರ್ಷ ಕಳೆದರೂ ಯಾವುದೇ ಉದ್ದೇಶದ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ. ಇತ್ತ ಕಡೆ ಕೃಷಿಯೂ ಇಲ್ಲದೆ, ಅತ್ತ ಕಡೆ ಯಾವುದೇ ಕೈಗಾರಿಕಾ ಯೋಜನೆಗಳು ಅನುಷ್ಠಾನ ಆಗದೆ ಉದ್ದಿಮೆಗಳ ವಶದಲ್ಲಿ ಕೃಷಿ ಭೂಮಿ ಉಳಿದುಕೊಂಡಿದೆ. ಸರ್ಕಾರದ ಈ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇದೇ ತಿಂಗಳ 10ನೇ ತಾರೀಖಿನಿಂದ ಅನರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದು ಈ ಭಾಗದ ಎಲ್ಲಾ ರೈತರು ಭಾಗವಹಿಸಬೇಕೆಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ ಮಂಜುನಾಥ ರೆಡ್ಡಿ ಮಾತನಾಡಿ ರೈತರಿಗೂ ಭೂಮಿಗೂ ತಾಯಿ ಮಗನ ಅವಿನಾಭಾವ ಸಂಬಂಧ ಹೊಂದಿದ್ದು ತಮ್ಮ ಜಮೀನನ್ನು ಕಳೆದುಕೊಂಡರೆ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಾರೆ.
ಕರೋನಾ ಸಂದರ್ಭದಲ್ಲಿ ರೈತರು ತಮ್ಮ ಹಳ್ಳಿಗಳಿಗೆ ಹಿಂದಿರುಗಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ನಮ್ಮ ಪ್ರಾಣವನ್ನು ಕೊಡುತ್ತೇವೆ ಹೊರತು ಜಮೀನು ಕೊಡುವುದಿಲ್ಲ. ಜಮೀನು ಕಳೆದುಕೊಳ್ಳುವ ಸಂದರ್ಭ ಬಂದಾಗ ನಾವೆಲ್ಲ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದರು.
ರೈತ ಮುಖಂಡ ಯದರೂರು ಸುರೇಶ್ ಮಾತನಾಡಿ ಶೇಷಾಪುರ ಗೋಪಾಲ್ ಅವರು ಕಮಿಷನ್ ಹಣದ ಆಸೆಯ ಸಲುವಾಗಿ ಒಬ್ಬ ಬ್ರೋಕರ್ ರೀತಿಯಲ್ಲಿ ಕಾರ್ಪೊರೇಟ್ ಭೂಕಬಳಿಕೆಗೆ ಸಂಪೂರ್ಣ ಬೆಂಬಲ ನೀಡಿ ತಮ್ಮನ್ನು ರೈತ ಮಗ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ.
ರೈತರು ಹಾಗೂ ಕೂಲಿಕಾರರ ಬಗ್ಗೆ ಕಾಳಜಿ ಇದ್ದರೆ ರೈತರ ಪರವಾಗಿ ಹೋರಾಟವನ್ನು ಮಾಡಿ ತಮ್ಮ ಆಪ್ತರಾಗಿರುವ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಅವರ ಮೇಲೆ ಒತ್ತಡ ತಂದು ಮಾವಿನ ತಿರುಳನ್ನು ತೆಗೆಯುವ ಕೈಗಾರಿಕೆಯನ್ನು ಈ ಭಾಗದಲ್ಲಿ ಸ್ಥಾಪಿಸಿ ರೈತರಿಗೆ ಹಾಗೂ ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶ ದೊರಕಿಸಿಕೊಡಿ.
ನಕಲಿ ರೈತಮುಖಂಡರ ಹಾಗೆ ಕೆಲವು ಸುಳ್ಳು ದಾಖಲೆಗಳನ್ನು ತಮ್ಮ ಕಂಕುಳಲ್ಲಿ ಇಟ್ಟುಕೊಂಡು ಕೈಗಾರಿಕಾ ವಲಯಕ್ಕೆ ಈ ಭಾಗದ ರೈತರ ಬೆಂಬಲವಿದೆ ಎಂದು ಹೇಳುವುದು ಶುದ್ಧ ಸುಳ್ಳು.
ಯದರೂರು ಹಾಗೂ ಸುತ್ತಮುತ್ತಲ ಗ್ರಾಮಗಳ 890 ಎಕರೆ ಜಮೀನುಗಳ ರೈತರು ಹಾಗೂ ಕೂಲಿ ಕಾರ್ಮಿಕರು ತಮ್ಮ ಜಮೀನನ್ನು ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ನಮ್ಮ ಜೀವನಕ್ಕೆ ಆಧಾರವಾಗಿರುವ ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದರು.
ಕೆ ಪಿ ಆರ್ ಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ. ಎ ಸಯದ್ ಫಾರೂಕ್, ತಾಲೂಕು ಜಂಟಿ ಕಾರ್ಯದರ್ಶಿ ಜಿ ಮಂಜುಳಾ, ಯಲದೂರು ಅಂಬರೀಶ್, ಲಕ್ಷ್ಮಿಸಾಗರ ಹನುಮೇಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅರಿಕೆರೆ ಹರೀಶ್, ನಾಗರಾಜಪ್ಪ, ಯಲ್ದೂರು ರಮೇಶ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಆದಿನಾರಾಯಣಪ್ಪ, ಎಚ್. ಜಿ ಹೊಸೂರು ಗೋಪಾಲಗೌಡ, ಚನ್ನಕೃಷ್ಣಪ್ಪ ಚೌಡಪ್ಪ ಇದ್ದರು.