

ಕಾರ್ಕಳ, ಅತ್ತೂರು:ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವವು ಇಂದು ಭಕ್ತರ ಅಭೂತಪೂರ್ವ ಮಹಾಪ್ರವಾಹವನ್ನು ಕಂಡಿತು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ತಮ್ಮ ಬಿನ್ನಹಗಳನ್ನು ಸಲ್ಲಿಸಲು ಪುಣ್ಯಕ್ಷೇತ್ರಕ್ಕೆ ಆಗಮಿಸಿದರು.
ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿಶಿಷ್ಟ ಬೆಳಕು ಮತ್ತು ಆಕರ್ಷಕ ಅಲಂಕಾರಗಳಿಂದ ಶೃಂಗಾರಗೊಂಡು ಭಕ್ತರ ಮನಸೆಳೆಯುವಂತಾಗಿತ್ತು.
ಸರ್ವಧರ್ಮ ಸೌಹಾರ್ದತೆ
ಈ ವರ್ಷದ ಮಹೋತ್ಸವದ ಕೇಂದ್ರ ವಿಷಯ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” (ರೋಮಾ 5:5) ಆಗಿದ್ದು, ಸರ್ವಧರ್ಮ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ. ಬಿನ್ನಹ ಸಲ್ಲಿಸಲು ಮತ್ತು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಲು ವಿವಿಧ ಧರ್ಮದ ಜನರು ಭಾಗವಹಿಸಿದ್ದರು.
ಪ್ರಮುಖ ಬಲಿಪೂಜೆಗಳು
ಮಹೋತ್ಸವದ ಮೂರನೇ ದಿನದಲ್ಲಿ ಹತ್ತು ಬಲಿಪೂಜೆಗಳು ನಡೆದಿದ್ದು, ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಅ/ವಂ/ ಡಾ/ ಲೋರೆನ್ಸ್ ಮುಕ್ಕುಝಿ ಮುಖ್ಯ ಬಲಿಪೂಜೆಯನ್ನು ನೆರವೇರಿಸಿದರು. ಧಾರ್ಮಿಕ ಬೋಧನೆಯಲ್ಲಿ ಅವರು, “ಭರವಸೆ ಎಂದಿಗೂ ಆಶಭಂಗ ಮಾಡದು; ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ಸಾಗಬೇಕು” ಎಂದು ಸಾರಿದರು.
ಗಣ್ಯರ ಭೇಟಿ
ಮಹೋತ್ಸವದಲ್ಲಿ ಹಲವು ರಾಜಕೀಯ ಮತ್ತು ಸಾರ್ವಜನಿಕ ಗಣ್ಯರು ಪಾಲ್ಗೊಂಡರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ರಮಾನಾಥ್ ರಾಯ್ ಮತ್ತು ವಿಧಾನಪರಿಷತ್ ಸದಸ್ಯ ಐವನ್ ಉಪಸ್ಥಿತಿ ಮೆರೆದರು.
ಪಾದಯಾತ್ರೆ ಮತ್ತು ಭಕ್ತರ ಚಟುವಟಿಕೆಗಳು
ಶಿರ್ವ, ಪಾಂಬೂರು, ಮತ್ತು ಮೂಡುಬೆಳ್ಳೆಯಿಂದ ಬಹಳಷ್ಟು ಜನ ಪಾದಯಾತ್ರೆ ಗೈದು ಅತ್ತೂರಿನ ಪುಣ್ಯಕ್ಷೇತ್ರವನ್ನು ತಲುಪಿದರು. ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸುವ ಮೂಲಕ ಭಕ್ತರು ತಮ್ಮ ಧಾರ್ಮಿಕ ನಂಬಿಕೆಯನ್ನು ದೃಢಪಡಿಸಿದರು.
ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವವು, ಭಕ್ತರ ಆತ್ಮಸಂತೃಪ್ತಿಯೊಂದಿಗೆ ಧಾರ್ಮಿಕ ನಂಬಿಕೆ, ಸೌಹಾರ್ದತೆ ಮತ್ತು ಸಮುದಾಯ ಭಾವೈಕ್ಯತೆಯನ್ನು ಮತ್ತಷ್ಟು ಘನಗೊಳಿಸಿತು.








