ಗಂಗೊಳ್ಳಿ; ಕುಟುಂಬ ಆಯೋಗ ಮತ್ತು 2025 ಜುಬಿಲಿ ಸಮಿತಿಯ ಮುಂದಾಳತ್ವದಲ್ಲಿ ದಂಪತಿಗಳ ಜಯಂತೋತ್ಸವ ಆಚರಣೆಯನ್ನು ಜನವರಿ 19 ನೇ ತಾರೀಕು ಭಾನುವಾರ ಬೆಳಿಗ್ಗೆ 8 ಗಂಟೆಯ ಬಲಿಪೂಜೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಒಟ್ಟು 43 ದಂಪತಿಗಳು ನವ ವಧು -ವರರಂತೆ ಉಡುಪನ್ನು ಧರಿಸಿ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
ಉಡುಪಿ ಧರ್ಮ-ಪ್ರಾಂತ್ಯದ ದಿವ್ಯ ಜ್ಯೋತಿ ನಿರ್ದೇಶಕರಾದ ವಂದನೀಯ ಗುರು ಸೀರಿಲ್ ಲೋಬೊ ಮತ್ತು ಗಂಗೊಳ್ಳಿ ದೇವಾಲಯದ ಧರ್ಮ ಗುರುಗಳಾದ ವಂದನೀಯ ಗುರು ಥಾಮಸ್ ರೋಶನ್ ಡಿಸೋಜರವರ ಯಾಜಕತ್ವಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು. ದೇವಾಲಯದಲ್ಲಿ ದಂಪತಿಗಳು ವಿವಾಹದ ಪ್ರತಿಜ್ಞೆಯನ್ನು ಪುನರುಚ್ಚರಿಸಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಬಲಿದಾನದ ನಂತರ ಬ್ಯಾಂಡ್ ಮತ್ತು ಬಣ್ಣದ ಕೊಡೆಗಳ ಮೂಲಕ ಮೆರವಣಿಗೆಯಲ್ಲಿ ದಂಪತಿಗಳನ್ನು ಸಂತ ಜೋಸೆಫ್ ವಾಜರ ಸಭಾಂಗಣಕ್ಕೆ ಕರೆದಯ್ಯಲಾಯಿತು. ಸಭಾಂಗಣದಲ್ಲಿ ದಂಪತಿಗಳಿಗಾಗಿ ವಿವಿಧ ಬಗೆಯ ನೃತ್ಯ ಕಾರ್ಯಕ್ರಮ ನೆರವೇರಿಸಲಾಯಿತು. ಕೊಂಕಣಿ ಕ್ರೈಸ್ತ ಲಗ್ನ ಉತ್ಸವದ ಸಂಪ್ರದಾಯದ ಹಾಡುಗಳನ್ನು (ವೋವಿಯೋ ವೇರ್ಸ್ ) ಹಾಡಲಾಯಿತು. ಕೆಲವು ಆಟಗಳನ್ನು ಆಡಿಸಿ ಬಹುಮಾನಗಳನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಫಾದರ್ ಸಿರಿಲ್ ಲೋಬೊರವರು ‘ಸುಖದಲ್ಲಿ ದುಃಖದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಸಹಕಾರವನ್ನು ನೀಡಿ ನಿಮ್ಮ ದಾಂಪತ್ಯ ಜೀವನವನ್ನು ನಿರ್ವಹಿಸಬೇಕೆಂದು ಸಂದೇಶ ನೀಡಿದರು. ಫಾದರ್ ರೋಷನ್ ಡಿಸೋಜರವರು ಎಲ್ಲಾ ದಂಪತಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯ ಡಿಸೋಜ, ಕಾನ್ವೆಂಟಿನ ಸುಪೀರಿಯರ್ ಧರ್ಮಭಗಿನಿ ಡಯಾನ, ಕುಟುಂಬ ಆಯೋಗದ ಸಂಚಾಲಕರಾದ ಫೆಲಿಕ್ಸ್ ರೆಬೇರೊ ಹಾಗೂ ಕುಟುಂಬ ಆಯೋಗದ ಮತ್ತು ಜುಬಿಲಿ ಸಮಿತಿಯ ಸದಸ್ಯರು ಈ ಕಾರ್ಯಕ್ರಮಕ್ಕೆ ಹಾಜರಿದ್ದರು. ಧರ್ಮ ಭಗಿನಿ ಆನೆಟ್ ಸ್ವಾಗತಿಸಿ, ಶ್ರೀಮತಿ ಫೇಲ್ಸಿ ಡಿಸಿಲ್ವರವರು ವಂದಿಸಿದರು. ಶ್ರೀಮತಿ ರೆನಿಟಾ ಬಾರ್ನೆಸ್ ಮತ್ತು ಕುಮಾರಿ ವಿನ್ಸಿಟಾ ಲೋಬೊರವರು ಕಾರ್ಯಕ್ರಮ ನಿರೂಪಿಸಿದರು. ಲೌದಾತೆ (ದೇವರಿಗೆ ಕ್ರತ್ಙತೆ) ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.