ಕೋಲಾರ:- ಜಗತ್ತಿನಲ್ಲಿಯೇ ಸ್ವಾಭಿಮಾನ, ಆತ್ಮಗೌರವ ಹಾಗೂ ಗೌರವಯುತ ಬದುಕಿಗಾಗಿ ಜರುಗಿದ ಏಕೈಕ ಸಮರ ಕೊರೆಂಗಾವ್ ಯುದ್ಧವಾಗಿದೆ ಎಂದು ಬೆಂಗಳೂರು ವಿವಿ ಉಪನ್ಯಾಸಕ ಡಾ.ಸುರೇಶ್ಗೌತಮ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಭಾರತೀಯ ಬಹುಜನ ಸೇವಾ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಭೀಮಾಕೊರೆಂಗಾವ್ ವಿಜಯೋತ್ಸವ ಹಾಗೂ ಸಾವಿತ್ರಿ ಬಾಪುಲೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.
ಅಂಬೇಡ್ಕರ್ ಅವರು ವಿದೇಶಿ ಗ್ರಂಥಾಲಯದಲ್ಲಿ ಅಧ್ಯಯನಶೀಲರಾಗಿದ್ದ ಸಂದರ್ಭದಲ್ಲಿ ಕೊರೆಂಗಾವ್ ಯುದ್ಧದ ಇತಿಹಾಸ ಅವರ ಕಣ್ಣಿಗೆ ಬಿದ್ದು, ಆನಂತರ ಅವರು ಪುಣೆ ಸಮೀಪ ಇರುವ ಕೊರೆಂಗಾವ್ ಸ್ಮಾರಕ ಹುಡುಕಿ ಯುದ್ಧದಲ್ಲಿ ಹುತಾತ್ಮರಾದ 22 ಮಂದಿ ಮಹರ್ ಸೈನಿಕರಿಗೆ ಗೌರವ ಸಲ್ಲಿಸಿದ್ದರು. ಆನಂತರ ಕೊರೆಂಗಾವ್ ಯುದ್ಧದ ಇತಿಹಾಸ ಕುರಿತು ತಮ್ಮ ಸಾಹಿತ್ಯ ಸಂಪುಟಗಳಲ್ಲಿ ದಾಖಲಿಸುವ ಮೂಲಕ ಲೋಕಕ್ಕೆ ತಿಳಿಯುವಂತೆ ಮಾಡಿದರೆಂದು ವಿವರಿಸಿದರು.
ಜ್ಯೋತಿ ಬಾಪುಲೆ ಹಾಗೂ ಸಾವಿತ್ರಿಬಾಯಿ ಪುಲೆ ಅವರು ವ್ಯಯಕ್ತಿಕ ಸಂಸಾರದ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ದಲಿತ, ಶೋಷಿತ ಅಲ್ಪಸಂಖ್ಯಾತ ಮಕ್ಕಳು ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಲು ಮುಂದಾದರು, ವಿದ್ಯೆ ಕಲಿತ ಪ್ರತಿಯೊಬ್ಬ ಶೋಷಿತರ ಮನೆಯಲ್ಲಿಯೂ ಜ್ಯೋತಿಬಾಪುಲೆ ಸಾವಿತ್ರಿ ಬಾಪುಲೆ ಭಾವಚಿತ್ರಗಳಿಟ್ಟು ನಿತ್ಯ ಸ್ಮರಿಸಬೇಕು, ಸರಕಾರಗಳು ಈ ದಂಪತಿಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷತೆವಹಿಸಿದ್ದ ಭಾರತೀಯ ಬಹುಜನ ಸೇವಾ ಸಮಿತಿ ರಾಜ್ಯಾಧ್ಯಕ್ಷ ಗಾಂಡ್ಲಹಳ್ಳಿ ಎನ್.ಚಲಪತಿ ಮಾತನಾಡಿ, ಸಮಾಜದಲ್ಲಿ ಬದಲಾವಣೆಗಾಗಿ ನಡೆದ ಕೊರೆಂಗಾವ್ ಯುದ್ಧ, ಇದಕ್ಕಾಗಿಯೇ ಶ್ರಮಿಸಿದ ಅಂಬೇಡ್ಕರ್, ವಿದ್ಯೆದಾನ ಮಾಡಲು ಜೀವನವನ್ನೇ ಪಣಕ್ಕಿಟ್ಟಿದ್ದ ಜ್ಯೋತಿಬಾಪುಲೆ ದಂಪತಿಗಳ ಇತಿಹಾಸ ತಿಳಿದು ಸಮಾಜ ಬದಲಾವಣೆಯಾಗಲಿ ಎಂಬ ಕಾರಣದಿಂದ ಕಾರ್ಯಕ್ರಮ ಆಯೋಜಿಸಿದ್ದು, ಆದರೆ, ಬದಲಾವಣೆ ಎನ್ನುವುದು ಅಷ್ಟು ಸುಲಭವಲ್ಲ ಎನ್ನುವುದು ಪ್ರಸ್ತುತ ಸಮಾಜ ನೋಡಿದರೆ ಅರ್ಥವಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಆರಕ್ಷಕ ನಿರೀಕ್ಷಕ ಸಿ.ರವಿಕುಮಾರ್ ಮಾತನಾಡಿ, ಅಂಬೇಡ್ಕರ್ ಪ್ರತಿಯೊಬ್ಬರಿಗೂ ಹಕ್ಕು ಜವಾಬ್ದಾರಿಗಳನ್ನು ನೀಡಿದ ಸಂವಿಧಾನ ರಚನೆ ಮಾಡಿದ್ದು, ಇದನ್ನು ಪ್ರತಿಯೊಬ್ಬರು ಅರಿತು ಪಾಲಿಸುವ ಮೂಲಕ ಕಾನೂನು ಪ್ರಕಾರ ಯಶಸ್ವಿಯಾಗಿ ಜೀವನ ಸಾಗಿಸುವಂತಾಗಬೇಕೆಂದು ಹೇಳಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಸಾಹಿತ್ಯ ಓದಿ ಅಳವಡಿಸಿಕೊಳ್ಳುವ ಮೂಲಕ ವ್ಯಯಕ್ತಿಕ ಹಾಗೂ ಸಾಮಾಜಿಕ ಬದುಕುಗಳಲ್ಲಿ ದೊಡ್ಡ ಮಟ್ಟದ ಪರಿವರ್ತನೆ ಹೊಂದಲು ಸಾಧ್ಯವಿದೆ ಎಂದರು.
ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ ಅಂಗನವಾಡಿ ಕೇಂದ್ರಗಳಲ್ಲಿ ದಲಿತ ಮಹಿಳೆಯರು ತಯಾರಿಸಿದ ಊಟ ತಿನ್ನಲು ಹಿಂದೇಟು ಹಾಕುವಂತ ವಾತಾವರಣ ಗ್ರಾಮಾಂತರ ಪ್ರದೇಶಗಳಲ್ಲಿ ಕಂಡು ಬರುತ್ತಿದೆ ಈ ಭಾವನೆ ತೊಲಗಬೇಕಿದೆ ಎಂದರು.
ಸರಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಮುರಳಿಮೋಹನ್ ಮಾತನಾಡಿ, ಸಾಮಾಜಿಕ ಸಮಾನತೆಯಲ್ಲಿ ಕೊಂಚ ಬದಲಾವಣೆ ಕಂಡು ಬರುತ್ತಿದ್ದರೂ, ಸಂಪೂರ್ಣ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿಲ್ಲ, ಅಂಬೇಡ್ಕರ್ರನ್ನು ಪೂರ್ಣವಾಗಿ ಅರಿತುಕೊಂಡರೆ ಬದಲಾವಣೆ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ಕುಮಾರ್, ಉರಿಗಿಲಿ ಗ್ರಾಪಂ ಅಧ್ಯಕ್ಷೆ ಅನು, ಕ್ಯಾಲನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶೀಲಾಕುಮಾರಿ ಹಾಗೂ ಕ್ಯಾಲನೂರು ಕೆಪಿಎಸ್ ಪ್ರಭಾರಿ ಮುಖ್ಯ ಶಿಕ್ಷಕ ಓ.ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.
ಈನೆಲಈಜಲ ವೆಂಕಟಾಚಲಪತಿ ತಂಡದಿಂದ ಹೋರಾಟದ ಹಾಡುಗಳ ಗಾಯನ, ಮುದುವಾಡಿ ರವಿಚಂದ್ರ ಸ್ವಾಗತಿಸಿ, ಧಮ್ಮಮಿತ್ರ ಮೂರ್ತಿ ನಿರೂಪಿಸಿ, ಅರಹಳ್ಳಿ ಸಂಘರ್ಷ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು. ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನುಗಳನ್ನು ವಿತರಿಸಲಾಯಿತು.
ಬಹುಜನ ಸೇವಾ ಸಮಿತಿಯ ಪದಾಕಾರಿಗಳಾದ ಕೋಡಿಕಣ್ಣೂರು ಯಲ್ಲಪ್ಪ, ಕೆ.ಮಹದೇವ್, ಮುನಿರಾಜು, ತಿಮ್ಮರಾಜು, ನಾಗರಾಜ, ವೆಂಕಿ, ರವಿಕುಮಾರ್, ವೆಂಕಟೇಶಪ್ಪ, ರವಿ, ಸಂದೀಪ್ ಇತರರು ಉಪಸ್ಥಿತರಿದ್ದರು.