ಶ್ರೀನಿವಾಸಪುರ: ಅರ್ಹ ಫಲಾನುಭವಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ಕಮರ್ಷಿಯಲ್ ವೆಹಿಕಲ್ಸ್ ಆಪರೇರ್ಸ್ ವೆಲ್ಫೇರ್ ಟ್ರಸ್ಟ್, ತ್ರಿಚಕ್ರ ವಾಹನ ಚಾಲಕರ ಸಂಘ, ರೋಟರಿ ಕ್ಲಬ್ ಹಾಗೂ ಶ್ರೀನಿವಾಸಪುರ ಸೆಂಟ್ರಲ್ ಸಂಯುಕ್ತಾಶ್ರಯದಲ್ಲಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆ, ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವೇ ನಿಜವಾದ ಭಾಗ್ಯ. ಯಾವುದೇ ಸಂಸರ್ಭದಲ್ಲಿ ಆರೋಗ್ಯ ಕಾಳಜಿ ಮರೆಯಬಾರದು. ಹಣಕ್ಕಾ ದುಡಿಯುವುದರಲ್ಲಿ ಆರೋಗ್ಯದ ಕಡೆ ಗಮನ ನೀಡದಿದ್ದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಕಟ್ಟಡ ಕಾರ್ಮಿಕರು, ವಿವಿಧ ವಾಣಿಜ್ಯ ವಾಹನಗಳ ಚಾಲಕರು ಕೆಲಸದ ಒತ್ತಡದಲ್ಲಿ ಆರೋಗ್ಯವನ್ನು ಮರೆಯಬಾರದು ಎಂದು ಹೇಳಿದರು.
ಕರ್ನಾಟಕ ಕಮರ್ಷಿಯಲ್ ವೆಹಿಕಲ್ಸ್ ಆಪರೇರ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಕುಮಾರ್ ಮಾತನಾಡಿ, ಕಟ್ಟಡ ಕಾರ್ಮಿಕರು ಹಾಗೂ ವಾಣಿಜ್ಯ ವಾಣಿಜ್ಯ ವಾಹನ ಚಾಲಕರು ತಪ್ಪದೆ ಕಾರ್ಮಿಕ ಇಲಾಖೆಯಲ್ಲಿ ರೂ.೨೫೦ ನೀಡಿ ನೋಂದಣಿಮಾಡಿಕೊಳ್ಳಬೇಕು. ಹಾಗೆ ಮಾಡುವುದರಿಂದ ಅವರಿಗಾಗಿ ಇರುವ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಮಿಕರಿಗೆ ಅಪಘಾತ ವಿಮಾ ಸೌಲಭ್ಯವಿದ್ದು, ಫಲಾನುಭವಿ ಅಪಘಾತದಲ್ಲಿ ಮೃತಪಟ್ಟಲ್ಲಿ, ಮೃತರ ಕುಟುಂಬಕ್ಕೆ ರೂ.೫ ಲಕ್ಷ ಪರಿಹಾರ ದೊರೆಯುವುದು. ಗಾಯಗೊಂಡಲ್ಲಿ ಅಥವಾ ಗಂಭೀರ ಆರೋಗ್ಯ ಸಮಸ್ಯೆ ಇದ್ದಲ್ಲಿ ನಿಯಮಾನುಸಾರ ಉಚಿತ ಚಿಕಿತ್ಸೆ ನೀಡಲಾಗುವುದು. ನೈಸರ್ಗಿಕ ಮರಣ ಪರಿಹಾರ ಹಾಗೂ ಅಂತ್ಯ ಸಂಸ್ಕಾರದ ವೆಚ್ಚ ಭರಿಸಲಾಗುವುದು. ನೋಂದಾಯಿತ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ನೀಡಲಾಗುವುದು. ನಿಧನರಾದ ಅಥವಾ ಶಾಶ್ವತವಾಗಿ ದುರ್ಬಲರಾದಲ್ಲಿ ಅಂಥ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡಲಾಗುವುದು. ಅರ್ಹ ಫಲಾನುಭವಿಗಳು ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಡಾ. ಕಿರಣ್ ಕುಮಾರ್, ಆಯೋಜಕರು ನರೇಶ್, ನೊಂದಾವಣೆಗಾರರು ಎಸ್.ರವಣಪ್ಪ, ತಾಲ್ಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಎ.ಎನ್.ಜಗದೀಶ್ ಯಾದವ್, ರಿಜ್ವಾನ್,ಕೋಟಿಗಾನಹಳ್ಳಿ.ಜಿ. ವೆಂಕಟೇಶ್, ಶ್ರೀನಿವಾಸಪುರ ರೋಟರಿ ಸೆಂಪ್ರಲ್ ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.