ಶ್ರೀನಿವಾಸಪುರ : ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ತರುವ ಮತ್ತು ಕನಿಷ್ಟ ಗುಣಮಟ್ಟವನ್ನು ಖಾತರಿಪಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯು.ಜಿ.ಸಿ) ಹೊಸ ನಿಯಮಾವಳಿ ರೂಪಿಸಿ ಕರಡು ಪ್ರಕಟಿಸಲಾಗಿದೆ ಈ ಕರಡಿನ ಮೊದಲ ಭಾಗದಲ್ಲಿ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಬೋಧಕ ಸಿಬ್ಬಂದಿಯ ನೇಮಕ ಹಾಗೂ ಬಡ್ತಿಯ ಕುರಿತ 2018ರ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಸೂಚಿಸಿದೆ. ಅದರಲ್ಲಿಯೂ ಬಡ್ತಿಯ ಕುರಿತಂತೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ಸುರೇಶ್ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಎಸ್ಎಫ್ಐ ವತಿಯಿಂದ ಸೋಮವಾರ ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯು.ಜಿ.ಸಿ.) ಹೊಸ ನಿಯಮಗಳನ್ನು ಜಾರಿಗೆ ತಂದಿರುವುದುನ್ನ ಖಂಡಿಸಿ ರಾಜ್ಯ ಉನ್ನತ ಸಚಿವರಿಗೆ ಮನವಿಯನ್ನು ರವಾನಿಸುವಂತೆ ತಹಶೀಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ವಿಶ್ವವಿದ್ಯಾಲಯ ಅನುದಾನ ಆಯೋಗ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿ ನೇಮಕಾತಿ ಮತ್ತು ಮುಂಬಡ್ತಿಗಾಗಿ ಕನಿಷ್ಠ ಅರ್ಹತೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ನಿರ್ವಹಿಸುವ ನಿಯಮಗಳ ಕುರಿತು ಜನವರಿ 6 2025ರಂದು ಸೋಮವಾರ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರು ಈ ಕರಡನ್ನು ಬಿಡುಗಡೆ ಮಾಡಿದರು.
ವಿಶ್ವವಿದ್ಯಾಲಯಕ್ಕೆ ಬೇಕಿರುವುದು ಶೈಕ್ಷಣಿಕ ಆಡಳಿತ ಅದು ದಕ್ಕುವುದು ಶೈಕ್ಷಣಿಕ ಕ್ಷೇತ್ರದಲ್ಲಿನಹಲವಾರು ವರ್ಷಗಳ ಅನುಭವ ಮಾತ್ರ ಅಂದರೆ ಒಬ್ಬ ವ್ಯಕ್ತಿ ಸಹಾಯಕ ಪ್ರಾಧ್ಯಾಪಕನಾಗುವ ತನಕ ವಿಭಾಗ ಮುಖ್ಯಸ್ಥ, ಡೀನ್, ಪರೀಕ್ಷಾ ಮಂಡಳಿಯ, ಪಠ್ಯ ರಚನಾ ಸಮಿತಿಗಳ ಸದಸ್ಯ ಅಧ್ಯಕ್ಷ, ಸಿಂಡಿಕೇಟ್ ಮತ್ತು ಆಕಾಡಮಿಕ್ ಕೌನ್ಸಿಲ್ ಸದಸ್ಯ ಇತ್ಯಾದಿ ಹಲವಾರು ಹುದ್ದೆಗಳನ್ನು ನಿರ್ವಹಿಸುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ಕನಿಷ್ಠ 25-30 ವರ್ಷಗಳ ಬೋಧನೆ, ಸಂಶೋಧನೆ, ಅನುಭವ ಇರುತ್ತದೆ. ಈ ಅನುಭವ ಅವನಿಗೆ ಶೈಕ್ಷಣಿಕ ನಾಯಕತ್ವಕ್ಕೆ ಬೇಕಾದ ಪೂರಕ ವ್ಯಕ್ತಿತ್ವ ಒದಗಿಸುತ್ತದೆ. ಈ ಕಾರಣಕ್ಕೆ ಪ್ರಾಧ್ಯಾಪಕನಾಗಿ ಕನಿಷ್ಠ 10 ವರ್ಷಗಳ ಅನುಭವ ಇರುವವರಿಗೆ ಮಾತ್ರ ಕುಲಪತಿ ಹುದ್ದೆ ನೀಡಲಾಗುತ್ತದೆ.
ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಪ್ರಸ್ತಾಪವನ್ನು ನಾವು ಒಪ್ಪಿಕೊಂಡರೆ ಸಂವಿಧಾನ ಒಕ್ಕೂಟ ವ್ಯವಸ್ಥೆಗೆ ಮಾರಕ, ಮತ್ತು ಉನ್ನತ ಶಿಕ್ಷಣದ ಸಂಪೂರ್ಣ ಖಾಸಗೀಕರಣಕ್ಕೆ ಇದು ಮೊದಲ ಹೆಜ್ಜೆಯಾಗಿದೆ ಎಂಬ ವಿಮರ್ಶೆಗಳನ್ನು ಮುಂದಿಟ್ಟಿವೆ. ಈ ರಾಜ್ಯಗಳ ಮುಖ್ಯಮಂತ್ರಿಗಳೇ ಕರಡು ನಿಯಮಾವಳಿ ವಿರೋಧಿಸಿ ಹೇಳಿಕೆ ನೀಡಿದ್ದಾರೆ ತಿಳಿಸಿದರು.
ಆದ್ದರಿಂದ ಈ ಪರಿಸ್ಥಿತಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೋಲಾರ ಜಿಲ್ಲಾ ಸಮಿತಿ ಈ ಹೊಸ ಕರಡನ್ನು ತಿರಸ್ಕರಿಸುತ್ತಿದೆ ಮತ್ತು ದೇಶದ ಉನ್ನತ ಶಿಕ್ಷಣವನ್ನು ಉಳಿಸಲು ಮುಂದಾಗಬೇಕೆಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡುತ್ತಿದೆ. ಮತ್ತು ಇದನ್ನು ಈ ಕೂಡಲೇ ವಾಪಸ್ ಪಡೆಯಬೇಕು ಇಲ್ಲವಾದ ಪಕ್ಷದಲ್ಲಿ ಇದರ ವಿರುದ್ಧ ಕರಡು ವರದಿಯನ್ನು ಸುಟ್ಟು ರಾಜ್ಯವ್ಯಾಪಿ ಪ್ರತಿಭಟನೆ ಮಾಡುತ್ತವೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೋಲಾರ ಜಿಲ್ಲಾ ಸಮಿತಿ ಎಚ್ಚರಿಸುತ್ತಿದೆ ಎಂದರು.
ಎಸ್.ಎಪ್.ಐ ತಾಲ್ಲೂಕು ಸಹ ಸಂಚಾಲಕರು ಪುನೀತ್, ಸಂಚಾರಿ ಸಮಿತಿ ಸದಸ್ಯರಾದ ಚರಣ್, ಎಸ್.ಎಪ್.ಐ ವಿದ್ಯಾರ್ಥಿ ನಾಯಕರಾದ ಉದಯ್ ಕುಮಾರ್ , ವಿಷ್ಣು, ನಿತಿನ್, ಮಧು, ರಾಹುಲ್ ಇದ್ದರು.