ಶ್ರೀನಿವಾಸಪುರ 1 : ಯಾವುದೇ ಕಾಮಗಾರಿಗಳಿಗೆ ಎಸ್ಟಿಮೇಷನ್ , ಟೆಂಡರ್ ಕರೆದಿಲ್ಲ, ಮಾಡಿರುವ ಕಾಮಗಾರಿಗಳಿಗೆ ಬಿಲ್ ಮಾಡಲಾಗಿ ಅವರಿಗೆ ಇಷ್ಟ ಬಂದ ಹಾಗೆ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ನಡೆದಿರುವ ಹಗರಣಗಳ ಬಗ್ಗೆ ತನಿಖೆಯಾಗಬೇಕಾಗಿದೆ. ಹಗರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
2021 ರಿಂದ 2024 ವರೆಗೂ ಜಮಾ ಖರ್ಚು ಬಗ್ಗೆ ಇದುವರೆಗೂ ಅಂದಾಜು ಲೆಕ್ಕವಿಲ್ಲ. ಈ ಹಿಂದಿನ ಅಧ್ಯಕ್ಷರ ಸಮಯದಲ್ಲಿನ ಕಾಮಗಾರಿಗಳಲ್ಲಿ ಹಗರಣಗಳು ನಡೆದಿವೆ ಅನುಮಾನ ವ್ಯಕ್ತವಾಗುತ್ತಿದೆ ಎಂದರು. ಪಟ್ಟಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2018 ರಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ರವರು 15 ಕೋಟಿ ಅನುದಾನವನ್ನು ತಂದು ಆ ಅನುದಾನಕ್ಕೆ ಅನುಮೋದನೆ ನೀಡಿದ್ದರು.
ಈ ಸಭೆಯಲ್ಲಿ ಪಟ್ಟಣ ಅಭಿವೃದ್ಧಿಗೆ ಸಂಬಂದಿಸಿದಂತೆ ಚರ್ಚೆ ಮಾಡಿ ಕೆಲವೊಂದು ಅಂಶಗಳನ್ನು ಎಲ್ಲಾ ಸದಸ್ಯರ ಚರ್ಚೆ ಮಾಡಿ ಒಮ್ಮತವನ್ನು ಪಡೆದು 15 ಕೋಟಿ ಅನುದಾನವನ್ನು ಬಳಿಸಿಕೊಳ್ಳಲು ಅಂಗೀಕರಿಸಲಾಯಿತು ಎಂದು ಮಾಹಿತಿ ನೀಡಿದರು.
ಪಟ್ಟಣದ ಎಸ್ಎಫ್ಎಸ್ ಶಾಲೆ ಸೇರಿ ಇತರೆ ಖಾಸಗಿ ಶಾಲಾ ಕಾಲೇಜುಗಳು ಸಂಬಂಬಂದಿಸಿದಂತೆ 2004 ರಿಂದಲೂ ಕಂದಾಯ ಬಾಕಿ ಇದೆ. ಇದನ್ನ ನಾನು ಈಗಾಗಲೇ ಖಾಸಗಿ ಶಾಲಾಕಾಲೇಜುಗಳ ಆಡಳಿತ ಮಂಡಲಿಗೆ ಮಾಹಿತಿ ನೀಡಿದ್ದೇನೆ. ಈ ವಾರ್ಡ್ಗಳ ಸದಸ್ಯರು ಆಯಾ ವಾರ್ಡ್ಗಳಿಗೆ ಸಂಬಂದಿಸಿದಂತೆ ಕಂದಾಯ ಬಾಕಿ ಇರುವ ಶಾಲಾ ಕಾಲೇಜು ಹಾಗು ಕಂದಾಯ ಬಾಕಿ ಇರುವವರು ಯಾರಾದರೂ ಇದ್ದಲ್ಲಿ ಅವರಿಗೊಂದು ಮಾಹಿತಿ ನೀಡಿ ಕಂದಾಯ ಕಟ್ಟುವಂತೆ ಒತ್ತಾಯ ಮಾಡಿ ಸಹಕರಿಸುವಂತೆ ಸದಸ್ಯರಲ್ಲಿ ಮನವಿ ಮಾಡಿದರು.