ಕೋಲಾರ : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್. ರವಿ ಅವರು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ಮಂಗಳ, ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
2012ರ ಐ.ಎ.ಎಸ್ ಬ್ಯಾಚ್ನ ಅಧಿಕಾರಿಯಾಗಿರುವ ಡಾ.ಎಂ.ಆರ್ ರವಿಯವರು ಶೈಕ್ಷಣಿಕವಾಗಿ ಎಂ.ಎ (ಇತಿಹಾಸ) ಎಂ.ಎ (ಇಂಗ್ಲೀಷ್) ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುತ್ತಾರೆ. ಇಂಗ್ಲೀಷ್ ಎಂ.ಎ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಇವರು ಮೈಸೂರಿನ ಪ್ರಮುಖ ಆಂಗ್ಲ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಅನುಭವ ಹೊಂದಿರುತ್ತಾರೆ.
ವಿವಿಧ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಅನೇಕ ವಿದ್ಯಾರ್ಥಿಗಳ ಜೀವನ ದೆಸೆಯನ್ನು ತಿರುಗಿಸಿದ ಅವರು ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕರಾಗಿ, ಹುಣಸೂರಿನಲ್ಲಿ ಮತ್ತು ಕಾರವಾರದಲ್ಲಿ ಸಹಾಯಕ ಆಯುಕ್ತರಾಗಿ ಕೊಡಗಿನಲ್ಲಿ ಹಿರಿಯ ಸಹಾಯಕ ಆಯುಕ್ತರಾಗಿ ವಿವಿಧ ಹುದ್ದೆಗಳಲ್ಲಿ ಕೆ.ಎ.ಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಐ.ಎ.ಎಸ್ ಅಧಿಕಾರಿಯಾಗಿ ಅವರು ಮೈಸೂರು ನಗರ ಆಯುಕ್ತರಾಗಿ ಶಿವಮೊಗ್ಗದಲ್ಲಿ ಪೌರಾಯುಕ್ತರಾಗಿ, ಮೈಸೂರಿನಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಎಂ.ಡಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೇ ಮಂಗಳೂರು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಕರಾಗಿ, ಜವಳಿ ಅಭಿವೃದ್ಧಿ ಆಯುಕ್ತರಾಗಿ, ಕೈಮಗ್ಗ ನಿದೇಶಕರಾಗಿ, ಬೆಂಗಳೂರು ಹಾಗೂ ಚಾಮರಾಜನಗರಗಳಲ್ಲಿ ಜಿಲ್ಲಾಧಿಕಾರಿಯಾಗಿ ಸರ್ಕಾರದ ವಿವಿಧ ಅಂತಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಶಿಶು ರಕ್ಷಣಾ ಯೋಜನಾ ನಿದೇಶಕರಾಗಿದ್ದರು.
ಆಡಳಿತದಲ್ಲಿ ಸಮನ್ವಯತೆ:
ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಕೋಲಾರ ತನ್ನದೇ ರೀತಿಯಲ್ಲಿ ವಿಶಿಷ್ಟವಾದ ಜಿಲ್ಲೆ. ಇಲ್ಲಿ ಕೆಲಸ ಮಾಡುವುದು ಉತ್ತಮ ಅವಕಾಶ ಎಂದು ಭಾವಿಸಿದ್ದೇನೆ. ಇಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿನ ಜನರು ಹಲವು ರೀತಿಯ ಚಿಂತನೆ ಇರುವವರು. ನಮ್ಮ ಕೆಲಸ ಇಲ್ಲಿನ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಆಡಳಿತದಲ್ಲಿ ಸಮನ್ವಯತೆ ಸಾಧಿಸುವುದು. ವೈಯಕ್ತಿಕವಾಗಿಯೂ, ವೃತ್ತಿ ಜೀವನದಲ್ಲೂ ಈ ಜಿಲ್ಲೆಯಲ್ಲಿ ಕೆಲಸ ಮಾಡುವುದು ಒಂದು ಮೈಲಿಗಲ್ಲು ಎಂದು ಭಾವಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದು ಬಹಳಷ್ಟು ಅವಕಾಶಗಳು ತುಂಬಿರುವ ಜಿಲ್ಲೆ ಅನೇಕ ಉದ್ಯಮಗಳಿವೆ, ಸಂಸ್ಥೆಗಳಿವೆ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬಹುದಾದ ಸಾಧ್ಯತೆಯಿರುವ ಜಿಲ್ಲೆ. ಇಲ್ಲಿನ ಸಮನ್ವಯತೆ ಕೊರತೆಗಳನ್ನು ಸರಿದೂಗಿಸುಕೊಂಡು ಹೋಗಬೇಕಾಗಿದೆ. ಜಿಲ್ಲೆಯ ಜನರ ಜೊತೆಗೆ ಸಂಪರ್ಕದಲ್ಲಿ ಇದ್ದುಕೊಂಡು ಎಲ್ಲರ ಅಭಿಪ್ರಾಯಗಳನ್ನು ಪಡೆದು ಸಮನ್ವಯದ ಕೊರತೆಯನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ.
ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳ ತಂಡಯಿದೆ. ಅವರು ಜವಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಜನರು ಪ್ರಜ್ಞಾವಂತರಾಗಿರುವುದರಿಂದ ಅಧಿಕಾರಿಗಳ ಜೊತೆಗೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಹೊಣೆಗಾರಿಕೆಯಿಂದ ಅಧಿಕಾರಿಗಳು ಜನ ಸಾಮಾನ್ಯರಿಗೆ ತ್ವರಿತ ಸ್ಪಂಧನೆ ನೀಡಬೇಕು. ಜಿಲ್ಲೆಯ ಬಗ್ಗೆ ಸಮಗ್ರ ಚಿತ್ರಣ ಪಡೆದು ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಲಾಗುವುದು ಎಂದರು