ಶ್ರೀನಿವಾಸಪುರ: ವಿದ್ಯಾಕೇಂದ್ರಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ದೇವಾಲಯಗಳಾಗಬೇಕೆ ಹೊರತು ಅಂಕಪಟ್ಟಿಗಳನ್ನು ತಯಾರಿಸುವ ಯಂತ್ರಗಳಾಗಬಾರದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ವಿ. ಗೋಪಿನಾಥ್ ಹೇಳಿದರು.
ಶ್ರೀನಿವಾಸಪುರ ತಾಲೂಕಿನ ಯಲ್ಡೂರು ಗ್ರಾಮದ ಶ್ರೀ ಪ್ರೀತಿವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಂಟನೇ ವರ್ಷದ ಅಂತರ ಶಾಲಾ ಗೀತಾ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಭಾರತೀಯ ಸಂಸ್ಕೃತಿಯ ಮೂಲಾಧಾರವಾದ ಭಗವದ್ಗೀತೆಯನ್ನು ಮಕ್ಕಳು ಪ್ರತಿದಿನವೂ ಪಠಣ ಮಾಡಿ ಅರ್ಥನ್ನು ಗ್ರಹಿಸಬೇಕು. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಿ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ನೀತಿಕಥೆಗಳನ್ನು ಹೇಳಬೇಕು.
ಇದರಿಂದ ಅವರಲ್ಲಿ ನೖತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಎನ್. ಹೇಮಾ, ಕ್ಷೇತ್ರ ಸಮನ್ವಯಾಧಿಕಾರಿ ಕೆ. ಸಿ. ವಸಂತ, ಶಿಕ್ಷಣ ಸಂಯೋಜಕರಾದ ಎನ್. ವಿ. ಲಕ್ಷ್ಮಿನಾರಾಯಣ ಮತ್ತು ಆರ್. ಸುಬ್ರಮಣಿ, ಸಮೂಹ ಸಂಪನ್ಮೂಲ ವ್ಯಕ್ತಿ ಆರ್. ಸುಜಾತ ಇದ್ದರು