ಕುಂದಾಪುರ: ಸೈಂಟ್ ಮೇರಿಸ್ ವಿದ್ಯಾರ್ಥಿಗಳ ಶಿಸ್ತು ನನಗೆ ಖುಷಿಕೊಟ್ಟಿದೆ. ನಾನು ಈ ಶಾಲೆಯ ಹಳೆ ವಿದ್ಯಾರ್ಥಿ ಎನ್ನುವ ಹೆಮ್ಮೆ ನನಗಿದೆ.ಜಗತ್ತಿಗೆ ಶಾಂತಿ ಹಾಗೂ ಭಾವೈಕ್ಯತೆಯ ಸಂದೇಶ ನೀಡಿದ ಪ್ರಭು ಯೇಸು ಕ್ರಿಸ್ತರ ಜನನದ ಹಬ್ಬವನ್ನು ಸೌಹಾರ್ದ ಕ್ರಿಸ್ಮಸ್ ರೂಪದಲ್ಲಿ ಆಚರಿಸುತ್ತಿರುವದು ಸಂತಸದ ವಿಷಯ ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ ಹೇಳಿದರು.ಅವರು ಶುಕ್ರವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ ಮತ್ತು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸೌಹಾರ್ದ ಕ್ರಿಸ್ಮಸ್ ಸಂಭ್ರಮದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸಂಚಾಲಕರೂ, ಕುಂದಾಪುರ ವಲಯದ ಧರ್ಮಗುರುಗಳೂ ಆದ ಅತೀ ವಂ.ಫಾ. ಪೌಲ್ ರೆಗೋ ಮಾತನಾಡಿ, ಕ್ರಿಸ್ಮಸ್ ಪ್ರೀತಿಯ ಸಂಕೇತ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ಗುರು ಹಿರಿಯರು, ಪೋಷಕರು ಮತ್ತು ನೆರೆಹೊರೆಯನ್ನು ಸದಾ ಪ್ರೀತಿ-ಸ್ನೇಹದಿಂದ ಕಾಣಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಕೆ.ಸತೀಶ್ ಗಾಣಿಗ ಇವರನ್ನು ಗುರುತಿಸಿ, ಗೌರವಿಸಲಾಯಿತು. ಡೈಲಿ ವಾರ್ತೆ ಸಂಪಾದಕ ಇಬ್ರಾಹಿಂ ಕೋಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶಾಂತಿ ಬರಟ್ಟೋ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವ್ಯಯಕ್ತಿಕ ಕ್ರೀಡಾ ಚಾಂಪಿಯನ್ ಪಡೆದವರಿಗೆ ಬಹುಮಾನ ನೀಡ ಗೌರವಿಸಲಾಯಿತು. ಸೈಂಟ್ ಮೇರಿಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಸ್ವಾಗತಿಸಿದರು. ಶಿಕ್ಷಕಿ ಸ್ಮಿತಾ ಡಿ. ಸೋಜಾ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕಿ ಸುಶೀಲಾ ಖಾರ್ವಿ ವಂದಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯೇಸು ಕ್ರಿಸ್ತರ ಜನನದ ನೃತ್ಯ ರೂಪಕ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.