ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಮೇಲುಗೈ ಸಾಧಿಸಿದ್ದು, ಬಿಜೆಪಿ ಯ ಆಡಳಿತ ಅಂತ್ಯ ಹಾಡಿದೆ.
ಸತತ ಮೂರು ದಶಕಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಈ ಬಾರಿ ಪರಾಜಯಗೊಂಡಿದ್ದಾರೆ.
ಡಿಸೆಂಬರ್ 8ರಂದು ಗಂಗೊಳ್ಳಿ ಗ್ರಾಮ ಪಂಚಾಯ್ತಿಯ 33 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ನಿಗದಿಯಂತೆ ಡಿ.11ರಂದು ಫಲಿತಾಂಶ ಪ್ರಕಟಗೊಳ್ಳಬೇಕಿತ್ತು. ಆದರೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದಿಂದ ಫಲಿತಾಂಶ ಎಣಿಕೆ ಮುಂದೂಡಿಕೆಯಾಗಿತ್ತು. ಡಿಸೆಂಬರ್ 12 ರಂದು ತಡರಾತ್ರಿ ಫಲಿತಾಂಶ ಘೋಷಣೆಯಾಗಿದೆ.
ಡಿ.10ರಂದು ನಡೆದ ಚುನಾವಣೆಯ ಫಲಿತಾಂಶವು ಗುರುವಾರ ರಾತ್ರಿ ಹೊರಬಿದ್ದಿದ್ದು ಕಾಂಗ್ರೆಸ್ – ಎಸ್ಡಿಪಿಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಒಟ್ಟು 33 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12, ಎಸ್ಡಿಪಿಐ ಬೆಂಬಲಿತ 7, ಬಿಜೆಪಿ ಬೆಂಬಲಿತ 12 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ – ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಮೈತ್ರಿ ಇದ್ದುದರಿಂದ ಒಂದೂವರೆ ದಶಕದ ಬಳಿಕ ಕಾಂಗ್ರೆಸ್ ಬೆಂಬಲಿತರು ಗಂಗೊಳ್ಳಿ ಗ್ರಾಮ ಪಂಚಾಯತಿಯ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.