ಕುಂದಾಪುರ: ಇಂದಿನ ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಅಷ್ಟೇ ದೈಹಿಕ ಚಟುವಟಿಕೆಗಳು ಮುಖ್ಯ. ಮಕ್ಕಳ ಆರೋಗ್ಯ ಸ್ಥಿತಿ ಮತ್ತು ಶಕ್ತಿ ಸಾಮರ್ಥ್ಯ ತುಂಬಾ ಕಡಿಮೆ ಮಟ್ಟದಲ್ಲಿದೆ. ಅದನ್ನು ಕ್ರೀಡೆಯಿಂದ ಮಾತ್ರ ಉತ್ತಮಪಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣ ಮತ್ತು ಆರೋಗ್ಯದಿಂದ ಮಾತ್ರ ಸಾಧ್ಯ ಎಂದು ಯುವ ಸಬಲೀಕರಣ ಕ್ರೀಡಾ ಸಂಸ್ಥೆಯ ಅಧಿಕಾರಿ ಶ್ರೀ ಕುಸುಮಾಕರ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಗಳ ಸುವರ್ಣ ವಾರ್ಷಿಕ ಕ್ರೀಡಾಕೂಟ ಸ್ಪಾರ್ಕ್ 2024 ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಶ್ರೀ ಸತ್ಯನಾರಾಯಣ ಜಿ., ಹಾಗೂ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಂಜಿತ್ ಟಿ.ಎನ್. ಇವರು ಮಾತನಾಡಿ ವಿದ್ಯಾರ್ಥಿಗಳು ಇಂದಿನ ವಾರ್ಷಿಕ ಕ್ರೀಡಾಕೂಟದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡು, ಮುಂದೆ ರಾಜ್ಯ, ರಾಷ್ಟ್ರಮಟ್ಟದಲ್ಲೂ ನಿಮ್ಮ ಕೀರ್ತಿ ಪ್ರಜ್ವಲಿಸಲಿ ಎಂದು ಶುಭ ಹಾರೈಸಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ ಮತ್ತು ಕ್ರೀಡಾಕೂಟದ ಅಧ್ಯಕ್ಷರಾಗಿರುವ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಅವರು ಕ್ರೀಡೆಯಲ್ಲಿಯೂ ಕೂಡ ಪಾದರಸದಂತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಎಚ್ಎಮ್ಎಮ್ ಮತ್ತು ವಿ ಕೆ ಆರ್ ಸಂಸ್ಥೆಗಳ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕರಾದ ಸ್ವಪ್ನಾ ಸತೀಶ್, ಶ್ವೇತಾ ಶೆಟ್ಟಿ ಮತ್ತು ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸೃಷ್ಟಿ ಕ್ರೀಡಾ ಪ್ರತಿಜ್ಞೆ ಭೋದಿಸಿದರು.