ಕೋಲಾರ ; ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಅನುಕೂಲವಾಗುವ ದಿಸೆಯಲ್ಲಿ ಅವಧಿಗಿಂತ ಮುಂಚೆಯೇ ಗುರಿ ತಲುಪಿ ಕೋಲಾರ ಜಿಲ್ಲೆಯನ್ನು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುವಂತೆ ಮಾಡಿದ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ರಾಜ್ಯ ಸರ್ಕಾರ ಅಭಿನಂದಿಸಿದೆ.
ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಈ ಕುರಿತು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಅಭಿನಂದನಾ ಪತ್ರ ಬರೆದಿದ್ದು, ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ ರಾಜ್ಯದ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುವಲ್ಲಿ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ವೀಕರಿಸಲಾಗಿರುವ 36718 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ 100 ರಷ್ಟು ವಿಲೇವಾರಿ ಮಾಡಿ, 10 ಸಿನ್ಮಾ ಮೌಲ್ಯ ಪಡೆದಿರುತ್ತೀರಿ ಎಂದು ಅಭಿನಂದಿಸಿದ್ದಾರೆ. 9.99 ವಿಲೇವಾರಿ ಸೂಚ್ಯಂಕದ ಪ್ರಕಾರ ಕೋಲಾರ ಜಿಲ್ಲೆಯಲ್ಲಿ 10.99 ಪಟ್ಟು ನಿಗದಿತ ಅವಧಿಗೆ ಮುಂಚೆ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿದ್ದೀರಿ.
ಕೋಲಾರ ಜಿಲ್ಲೆ ಈ ವಿಷಯದಲ್ಲಿ ರಾಜ್ಯಕ್ಕೆ ಮುಂಚೂಣಿ ಸ್ಥಾನ ಪಡೆದಿದೆ. ನಾಡ ಕಚೇರಿ ಹಾಗೂ ಅಟಲ್ ಜಿ ಜನಸ್ನೇಹಿ ಕಚೇರಿಗಳ ಸಹಕಾರ ಮತ್ತು ಸಿಬ್ಬಂದಿಗಳ ಕಾರ್ಯತತ್ಪರತೆ ಶ್ಲಾಘನೀಯ ಎಂದು ಅಭಿನಂದನೆ ವ್ಯಕ್ತಪಡಿಸಿದ್ದಾರೆ.