ಐಸಿಎಆರ್ – ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ, ರೇಷ್ಮೆ ಇಲಾಖೆ, ಕೋಲಾರ, ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ “ಗುಣಮಟ್ಟದ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಸುಧಾರಿತ ಯಂತ್ರಗಳು ಮತ್ತು ಆಧುನಿಕ ತಾಂತ್ರಿಕತೆಗಳ” ಅರಿವು ಕಾರ್ಯಾಗಾರವನ್ನು ದಿನಾಂಕ: 20.11.2024 ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟನೆಯನ್ನು ನೆರವೇರಿಸಿದ ಶ್ರೀ. ನಾಗರಾಜ್ ಎಂ ರೇಷ್ಮೆ ಉಪನಿರ್ದೇಶಕರು, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ, ಕೋಲಾರರವರು ಮಾತನಾಡಿ, ರೇಷ್ಮೆ ನೂಲು ಬಿಚ್ಚಾಣಿಕೆದಾರರು ಈ ಹಿಂದೆ ಚರಕ, ಕಾಟೇಜ್ ಬೆಸಿನ್, ಮಲ್ಟಿಎಂಡ್ ರೀಲಿಂಗ್ ಯಂತ್ರಗಳನ್ನು ಬಳಸಿ ರೇಷ್ಮೆನೂಲು ಬಿಚ್ಚಾಣಿಕ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಆಟೋಮೆಟಿಕ್ ರೀಲಿಂಗ್ ಯಂತ್ರದ ಮೂಲಕ ದಿನಕ್ಕೆ 1000 ಕೆ.ಜಿ. ರೇಷ್ಮೆಗೂಡಿನಿಂದ ನೂಲನ್ನು ತೆಗೆಯಬಹುದಾಗಿದ್ದು, ಕೇಂದ್ರ ರೇಷ್ಮೆ ಮಂಡಳಿಯಿಂದ ದೊರಕುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಶಿವಾನಂದ ಹೊಂಗಲ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ¬¬¬¬ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಕರ್ನಾಟಕದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಶೇ. 40 ರಷ್ಟು ಪಾಲನ್ನು ಹೊಂದಿದ್ದು, ಸುಧಾರಿತ ರೀಲಿಂಗ್ ಯಂತ್ರಗಳಾದ ಆಟೋಮೆಟಿಕ್ ರೀಲಿಂಗ್ ಯಂತ್ರ ಬಳಸಿ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಹೆಚ್ಚು ರೇಷ್ಮೆ ಉತ್ಪಾದಿಸಬಹುದಾಗಿದ್ದು ನೂಲು ಬಿಚ್ಚಾಣಿಕೆದಾರರು ಇಲಾಖೆಯ ಸಹಾಯಧನವನ್ನು ಪಡೆದು ಆರ್ಥಿಕ ಅಭಿವೃದ್ಧಿ ಹೊಂದಬಹುದೆಂದು ತಿಳಿಸಿದರು.
ರೇಷ್ಮೆ ತಾಂತ್ರಿಕ ಸೇವಾ ಕೇಂದ್ರ, ಶಿಡ್ಲಘಟ್ಟದ ಡಾ. ಮಹೇಶ್, ಕೆ. ಎನ್., ವಿಜ್ಞಾನಿ “ಡಿ” ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರೇಷ್ಮೆನೂಲು ಬಿಚ್ಚಾಣಿಕೆಯಲ್ಲಿ ಸುಧಾರಿತ ಯಂತ್ರಗಳ ಬಳಕೆಗೆ ಸಂಬಂಧಿಸಿದಂತೆ ಗುಣಮಟ್ಟದ ರೇಷ್ಮೆನೂಲು ಉತ್ಪಾದನೆಗೆ ಪ್ರಮುಖ ಅಂಶಗಳಾದ ರೇಷ್ಮೆಗೂಡಿನ ಗುಣಮಟ್ಟ, ಆಕಾರ, ಗಾತ್ರ, ಗೂಡಿನ ತೂಕ, ರೆಂಡಿಟಾ, ಶೇಖಡವಾರು ನೂಲು ಬಿಚ್ಚಾಣಿಕೆ, ನೂಲು ಬಿಚ್ಚಾಣಿಕೆ ಪ್ರಕ್ರಿಯೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ, ನೀರಿನ ಗುಣಮಟ್ಟ, ನೂಲು ಬಿಚ್ಚಾಣಿಕೆದಾರರ ಕಾರ್ಯಕ್ಷಮತೆ ಮತ್ತು ಕೌಶಲ್ಯ, ಕೆಲಸ ಮಾಡುವ ಪರಿಸರ ಪ್ರಮುಖವಾಗಿ ಒಳಗೊಂಡಿದ್ದು, ರೇಷ್ಮೆನೂಲು ಬಿಚ್ಚಾಣಿಕೆದಾರರು ಈ ಅಂಶಗಳ ಬಗ್ಗೆ ಗಮನಹರಿಸಿ ಗುಣಮಟ್ಟದ ರೇಷ್ಮೆ ಉತ್ಪಾದಿಸಬೇಕೆಂದು ತಿಳಿಸಿದರು. ಡಾ. ಬಲರಾಮ್ ಯಾದವ, ವಿಜ್ಞಾನಿ “ಬಿ” ರೇಷ್ಮೆನೂಲು ಬಿಚ್ಚಾಣಿಕೆಯಲ್ಲಿ ಆಧುನಿಕ ತಾಂತ್ರಿಕತೆಗಳ ಕುರಿತು ವಿವರಿಸಿದರು.
ಕೋಲಾರ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರ, (ರೀಲಿಂಗ್), ರೇಷ್ಮೆ ವಿಸ್ತರಣಾಧಿಕಾರಿ, ಶ್ರೀ. ಚಂದ್ರಶೇಖರ್ಗೌಡ ಎನ್, ಶ್ರೀನಿವಾಸಪುರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ, ರೇಷ್ಮೆ ವಿಸ್ತರಣಾಧಿಕಾರಿ ಶ್ರೀ. ಸಂಗನಬಸಯ್ಯಮಠರವರು ಅತಿಥಿಗಳಾಗಿ ಭಾಗವಹಿಸಿದ್ದರು. ಜೊತೆಗೆ ಸುಮಾರು 50 ರೇಷ್ಮೆ ನೂಲು ಬಿಚ್ಚಾಣಿಕೆದಾರರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಸದರಿ ಕಾರ್ಯಕ್ರಮದ ಆಯೋಜಕರಾದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಶಶಿಧರ್ ಕೆ. ಆರ್. (ರೇಷ್ಮೆ ಕೃಷಿ) ಡಾ. ಮಂಜುನಾಥ ರೆಡ್ಡಿ ಟಿ.ಬಿ, (ಸಸ್ಯ ಸಂರಕ್ಷಣೆ) ಹಾಗೂ ಶ್ರೀಮತಿ. ಸ್ವಾತಿ ಜಿ.ಆರ್. ವಿಷಯ ತಜ್ಞರು (ಹವಾಮಾನ ಶಾಸ್ತ್ರ), ರವರು ಹಾಜರಿದ್ದರು.