ಕೋಲಾರ,ನ.16: ವಿದ್ಯಾರ್ಥಿಗಳು ಸಾಧನೆಯ ಮೂಲಕ ಸಾಕಾರಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಮಂಗಳ ಅವರು ತಿಳಿಸಿದರು.
ತಾಲೂಕಿನ ಕ್ಯಾಲನೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೀಡುವ ಹೃದಯ ಪೌಂಡೇಶನ್ ಬೆಂಗಳೂರು ವತಿಯಿಂದ ಪಿಂಕ್ ರೂಂ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಋತುಮತಿ ಆದ ಸಂದರ್ಭದಲ್ಲಿ ಮುಜುಗರ ಆಗುವುದು ಬೇಡ ಅದೊಂದು ಸಹಜ ಜೈವಿಕ ಕ್ರಿಯೆ ಆಗಿದ್ದು ಅದನ್ನು ಸಮರ್ಥವಾಗಿ ಎದುರಿಸಬೇಕೆಂದ ಅವರು, ಈ ಬಗ್ಗೆ ಆತಂಕ ಪಡುವುದು ಬೇಡ ಎಂದರು.
ನೀಡುವ ಹೃದಯ ಪೌಂಡೇಶನ್ನ ಸಂಸ್ಥಾಪಕ ಆಂಟೋನಿ ಸುಜಿತ್ ಅವರ ವೈಯಕ್ತಿಕ ಮುತುವರ್ಜಿಯಂತೆ ಈ ಶಾಲೆಯಲ್ಲಿ ಪ್ರಾರಂಭಿಸಿರುವ ಎರಡು ಹಾಸಿಗೆಗಳ ವಿಶ್ರಾಂತಿ ಕೊಠಡಿ (ಪಿಂಕ್ ರೂಂ), ಇಲ್ಲಿರುವ ಸುದ್ಧಿ ದಿನಪತ್ರಿಕೆಗಳು, ಗ್ರಂಥಾಲಯ, ಸ್ಯಾನಿಟರಿ ಪ್ಯಾಡ್, ಅದನ್ನು ಸುಡುವ ಯಂತ್ರ ಬಳಕೆ ಮಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೀಡುವ ಹೃದಯ ಪೌಂಡೇಶನ್ನ ಸಂಸ್ಥಾಪಕ ಆಂಟೋನಿ ಸುಜಿತ್ ಮಾತನಾಡಿ, ತಾನೊಬ್ಬ ಮಗಳ ತಂದೆಯಾಗಿ ಮಗಳ ಮೊದಲ ಋತುವತಿ ಆದ ಸಂದರ್ಭದಲ್ಲಿ ಆಕೆ ಅನುಭವಿಸಿದ ಸಂಕಷ್ಟವನ್ನು ಅರಿತು ತಾನು ಸರ್ಕಾರಿ ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಪ್ರೌಢಶಾಲೆಗಳಲ್ಲಿ ಪಿಂಕ್ ರೂಂ ಅಭಿಯಾನ ಕೈಗೊಂಡಿರುವುದಾಗಿ ತಿಳಿಸಿದರು.
ಈಗಾಗಲೇ ತಾಲೂಕಿನ ಮದನಹಳ್ಳಿ, ಕುರುಗಲ್ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪಿಂಕ್ ರೂಂಗಳನ್ನು ಸ್ಥಾಪಿಸಿದ್ದು, ಈಗ ಕ್ಯಾಲನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಣ್ಣುಮಕ್ಕಳಿಗಾಗಿ ಒಂದು ಕೊಠಡಿಯನ್ನು ದತ್ತು ಪಡೆದು ಅದನ್ನು ಪುನ:ಶ್ಚೇತನಗೊಳಿಸಿ ಅದಕ್ಕೆ ಪಿಂಕ್ ಬಣ್ಣ ಬಳಿದು, ಅದರೊಳಗೆ ಹೆಣ್ಣುಮಕ್ಕಳ ಋತು ಸ್ರಾವದ ಸಂದರ್ಭದಲ್ಲಿ ಅವರಿಗೆ ಅನಕೂಲವಾಗುವಂತೆ ವಿಶ್ರಾಂತಿಗಾಗಿ ಎರಡು ಹಾಸಿಗೆಗಳು, ಅಧ್ಯಯನಕ್ಕಾಗಿ ಪುಸ್ತಕಗಳು, ಮೇಜು, ಕುರ್ಚಿಗಳು, ದೇಶೀಯ ಹಾಗೂ ವಿದೇಶೀಯ ವಿನ್ಯಾಸದ ಶೌಚಾಲಯ, ಸ್ನಾನಗೃಹ, ಬಟ್ಟೆ ಬದಲಿಸುವ ಜಾಗ, ಕೈತೊಳೆಯುವ ಜಾಗ ಹಾಗೂ ಮುಟ್ಟಿನ ಸಂದರ್ಭದಲ್ಲಿ ಉಪಯೋಗಿಸುವ ನ್ಯಾಪ್ಕಿನ್ ಹಾಗೂ ಬಳಕೆ ನಂತರ ವಿಲೇವಾರಿಗಾಗಿ ಅದನ್ನು ಸುಡುವ ಯಂತ್ರ ಸ್ಥಾಪಿಸಲಾಗಿದ್ದು, ಈ ಕೊಠಡಿ ಸಾಕಷ್ಟು ಗಾಳಿ ಮತ್ತು ಬೆಳಕು ಬರುವಂತೆ ರಿಪೇರಿ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಭಿತ ಸುಜಿತ್, ಏಂಜಲ್ ಸುಜಿತ್, ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗಮೂರ್ತಿ, ಗೌರವಾಧ್ಯಕ್ಷ ಶ್ರೀನಿವಾಸ್, ಶಿಕ್ಷಣಾಧಿಕಾರಿ ಶ್ರೀನಿವಾಸ್, ಕಂದಾಯ ಅಧಿಕಾರಿ ಮಂಜುನಾಥ್, ಅಮೀರ್, ಕಲ್ಪನಾ, ಮುನಿಸ್ವಾಮಿ, ಲಾವಣ್ಯ, ಪ್ರಕಾಶ್, ಶೀಲಾಕುಮಾರಿ ಮುಂತಾದವರು ಭಾಗವಹಿಸಿದ್ದರು.
ಶಿಕ್ಷಕರಾದ ನಾಗರಾಜ್ ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕ ಡಾ.ಬಿ.ಎಂ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಮಣಿ ಸ್ವಾಗತಿಸಿ, ರಾಜೇಶ್ ವಂದಿಸಿದರು.