ಕೋಲಾರ: ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಗಾಧ ಸಾಧನೆ ಮಾಡುವ ಮೂಲಕ ಪ್ರಶಸ್ತಿಗೆ ಭಾಜನರಾಗಬೇಕೆ ವಿನಹಃ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಬಾರದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೋಲಾರದ ಅಂತರಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಸೋಮವಾರ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಿ.ಎಲ್.ರಾಜೇಂದ್ರಸಿಂಹ ಹಾಗೂ ಕೆ.ಬಿ.ಜಗದೀಶ್ ಮತ್ತು ಬಿ.ಆರ್ಮುಗಂ ಪ್ರಶಸ್ತಿಗೆ ಭಾಜನರಾದ ಸಿ.ಎ.ಮುರಳಿಧರರಾವ್ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಮಾಡಿರುವ ಸಾಧನೆಯಿಂದ ಆ ಪ್ರಶಸ್ತಿಗೆ ಗೌರವ ಲಭಿಸಬೇಕು. ಲಾಬಿ ಮಾಡಿ ಅರ್ಜಿ ಹಾಕಿ, ಶಿಫಾರಸು ಮಾಡಿ ಪ್ರಶಸ್ತಿ ಪಡೆಯುವುದಲ್ಲ ಎಂದು ಹೇಳಿದರು.
ಜಿಲ್ಲಾಡಳಿತ ಮಾಧ್ಯಮ ಕ್ಷೇತ್ರದಲ್ಲಿ ಇಬ್ಬರಿಗೆ ಪ್ರಶಸ್ತಿ ನೀಡುವ ಕೆಲಸವನ್ನು ಮಾಡಿರುವುದು ಶ್ಲಾಘನೀಯ. ಪ್ರಶಸ್ತಿಗೆ ಭಾಜನರಾಗಿರುವವರನ್ನು ಕಂಡು ಅಸೂಯೆಪಡಬಾರದು ನಮಗೂ ಪ್ರಶಸ್ತಿ ಲಭಿಸುವ ಹಾಗೆ ನಮ್ಮ ಕಾಯಕದಲ್ಲಿ ನಾವು ತೊಡಗಿಕೊಳ್ಳಬೇಕು. ಜಿಲ್ಲಾಡಳಿತ ಗುರುತಿಸಿ ಪ್ರಶಸ್ತಿ ನೀಡುವ ಸಾಧನೆ ನಾವು ಮಾಡಬೇಕು ಎಂದರು.
ಹಿರಿಯ ಪತ್ರಕರ್ತರಾದ ಜಗದೀಶ್ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇವರ ಕಾರ್ಯ ವೈಖರಿ ಆಸಕ್ತಿ, ಇತರ ಕಿರಿಯ ಪತ್ರಕರ್ತರಿಗೆ ದಾರಿಯಾಗಬೇಕು. ದೃಶ್ಯ ಮಾಧ್ಯಮದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿರುವ ರಾಜೇಂದ್ರಸಿಂಹ ಅವರ ಕೆಲಸ ಜಿಲ್ಲೆಯ ಜನತೆಗೆ ಗೊತ್ತಿದೆ. ಅವರು ಹೆಸರುವಾಸಿಯಾಗಿದ್ದರು ಸಹ ಸಹಪಾಠಿಗಳೊಂದಿಗೆ ಹಾಗೂ ಕಿರಿಯ ಪತ್ರಕರ್ತರಿಗೆ ಸಲಹೆ ಸೂಚನೆಗಳು ಉತ್ತಮ ಕಾರ್ಯ ಚಟುವಟಿಕೆ ನಡೆಸಲು ಸಹಕಾರಿಯಾಗಿದ್ದಾರೆ. ಇವರ ಗುಣಮಟ್ಟದ ಕೆಲಸಗಳನ್ನು ಕಂಡು ಪತ್ರಕರ್ತರು ಇನ್ನು ಉತ್ತಮ ಸಾಧನೆ ಮಾಡುವ ಕಡೆ ಹೆಜ್ಜೆ ಹಾಕಬೇಕು ಎಂದು ತಿಳಿಸಿದರು.
ಕೆಜಿಎಫ್ ತಾಲೂಕಿನಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಕಾಯಕದಲ್ಲಿ ಪತ್ರಕರ್ತರಾಗಿ ಸಿ.ಎ. ಮುರಳಿಧರರಾವ್ ಮುಂಚೂಣಿಯಲ್ಲಿದ್ದಾರೆ. ಉತ್ತಮವಾಗಿ ಕನ್ನಡ ಬರೆಯುವ ಹಿರಿಯ ಪತ್ರಕರ್ತರು ಎಂದು ಕೊಂಡಾಡಿದರು.
ಶೋಕಿ ಪತ್ರಕರ್ತನಾಗದೆ, ವೃತ್ತಿ ಗೌರವ ಉಳಿಸುವ ಆಸಕ್ತಿ ಇರುವ ಫ್ಯಾಷನ್ ಪತ್ರಕರ್ತನಾಗಬೇಕು. ಕಲಿಯುವ ಆಸಕ್ತಿ, ಕೆಲಸದಲ್ಲಿ ಪರಿಶ್ರಮ ಮೈಗೂಡಿಸಿಕೊಂಡು ಮುಂದುವರೆದರೆ. ಉತ್ತಮ ಪತ್ರಕರ್ತನಾಗಿ ಹೊರ ಹೊಮ್ಮಬಹುದು. ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುವ ಮೂಲಕ ಪತ್ರಕರ್ತರ ಸಂಘದ ಘನತೆ ಉಳಿಸುವ ಕಾರ್ಯವನ್ನು ಮಾಡಬೇಕು ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಪ್ರಶಸ್ತಿ, ಪುರಸ್ಕಾರ ಸಿಕ್ಕಿರುವ ಪತ್ರಕರ್ತರಿಂದ ಇತರ ಪತ್ರಕರ್ತರಿಗೂ ಗೌರವ ಲಭಿಸುತ್ತದೆ. ಸಮಾಜ ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗುವ ರೀತಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.
ಪತ್ರಕರ್ತ ಜಗದೀಶ್ ಹಾಗೂ ರಾಜೇಂದ್ರ ಸಿಂಹ ಅವರ ವಿದ್ಯೆ, ಬುದ್ಧಿಯನ್ನು ಇತರ ಪತ್ರಕರ್ತರಿಗೆ ಹಂಚುವ ಮೂಲಕ ಜೊತೆ ಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಆದರ್ಶ, ಕೆಲಸ ಮಾಡುವ ದಾಟಿಯನ್ನು ಇಂದಿನ ಪತ್ರಕರ್ತರು ಮನಗಾಣುವ ಮೂಲಕ ಉತ್ತಮ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಂದ್ರ ಸಿಂಹ, ಒಬ್ಬ ವ್ಯಕ್ತಿ ಸಾಧನೆ ಮಾಡಲು ಸಹಪಾಠಿಗಳೇ ಮುಖ್ಯ ಕಾರಣರಾಗುತ್ತಾರೆ. ಜೊತೆಯಲ್ಲಿ ಮಾರ್ಗದರ್ಶನ ನೀಡುವ ಮೂಲಕ ನಾನು ಮಾಡುವ ಕೆಲಸಗಳಿಗೆ ಬೆಂಬಲ ಸಹಕಾರ ನೀಡಿದ್ದಾರೆ. ಬೇರೆ ಊರಿನಿಂದ ಈ ಜಿಲ್ಲೆಗೆ ಬಂದ ನಾನು ಮಾಧ್ಯಮ ಕ್ಷೇತ್ರದಲ್ಲಿ ಏನು ಗೊತ್ತಿಲ್ಲದ ಸಮಯದಲ್ಲಿ ಹಿರಿಯ, ಕಿರಿಯ ಪತ್ರಕರ್ತರು ನನಗೆ ದಾರಿದೀಪರಾಗಿದ್ದಾರೆ. ಈ ನಿಮ್ಮ ಎಲ್ಲಾ ಪ್ರೀತಿ ವಿಶ್ವಾಸವನ್ನು ನಾನು ಎಂದೂ ಮರೆಯುವುದಿಲ್ಲ ಎಂದರು.
ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್ಕುಮಾರ್ ನಿರೂಪಿಸಿ, ವಂದಿಸಿದರು,
ಪತ್ರಕರ್ತರಾದ ಎಸ್.ರವಿಕುಮಾರ್, ಸಮೀರ್ ಅಹಮ್ಮದ್, ದೀಪಕ್, ಮದನ್, ಸಿ.ವಿ.ನಾಗರಾಜ್, ಮಾಮಿ ಪ್ರಕಾಶ್ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.