ಕುಂದಾಪುರ; ಹಿಂದಿ ಭಾಷೆಯು ವಿಶ್ವದ ಜನ ಮಾನಸದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಭಾವೈಕ್ಯತೆಯ ಜ್ಞಾನ ಭಂಡಾರವನ್ನು ತಲುಪಿಸುವ ಶ್ರೇಷ್ಠ ಭಾಷೆಯಾಗಿದೆ. ಸಾಮಾಜಿಕ ಭಾಂದವ್ಯ ಮತ್ತು ವೈವಿಧ್ಯಮಯ ಜನ ಜೀವನದಲ್ಲಿ ಸಮಾನತೆಯ ಸಂದೇಶವನ್ನು ಸಾರುವ ಭಾಷೆ ಹಿಂದಿ. ಇಂದು ಮಾನವನ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಹಿಂದಿ ಭಾಷೆಯು ಉನ್ನತ ದರ್ಜೆಯಲ್ಲಿದೆ. ಭಾರತ ದೇಶದ ಸಾಂಸ್ಕೃತಿಕ ಮತ್ತು ಜನಪದೀಯ ಬದುಕಿನ ವಿವಿಧ ಜ್ಞಾನ ಪದರಗಳ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಸರಳ ಸುಂದರ ಭಾಷೆ ಹಿಂದಿಯಾಗಿದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಔದ್ಯೋಗಿಕ ಮತ್ತು ದುಡಿಮೆಯ ಭಾಷೆಯಾಗಿರುವ ಹಿಂದಿ ಅನುವಾದ, ಸಾಹಿತ್ಯದ ಬರವಣಿಗೆಯ ಬೆಳವಣಿಗೆಯ ಮೂಲಕ ಇತರ ಭಾಷಾ ಪದಗಳನ್ನು ತನ್ನೊಳಗೂಡಿಸಿಕೊಳ್ಳುತ್ತಾ, ಅಂತರ್ಜಾಲ ಮತ್ತು ಕಂಪ್ಯೂಟರ್ ನಲ್ಲಿ ಅತಿ ಹೆಚ್ಚು ಮಾಹಿತಿ ನೀಡುತ್ತಿರುವ ಭಾಷೆಯಾಗಿದೆ ಎಂದು ಉಡುಪಿ ತಾಲೂಕಿನ ಶಿರ್ವದ ಸೈಂಟ್ ಮೇರಿಸ್ ಕಾಲೇಜಿನ ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ. ವಿಠಲ್ ನಾಯಕ್ ಹೇಳಿದರು. ಅವರು ಕುಂದಾಪುರದ ಭಂಡಾರ್ಕಾರ್ ಕಾಲೇಜಿನಲ್ಲಿ ನಡೆದ “ಆರೋಹ – 2024” ಹಿಂದಿ ದಿನಾಚರಣೆಯ ಅಂತರ್ ತರಗತಿಹಿಂದಿ ಸ್ಪರ್ಧೆಯ ಸಮಾರಂಭವನ್ನು ಉದ್ಘಾಟಿಸುತ್ತಾ, ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಶಿಕ್ಷಣ ಪದ್ದತಿಯು ವಿಶ್ವಕ್ಕೇ ಮಾದರಿಯಾಗಿದೆ ಹಾಗೂ ಭವಿಷ್ಯದಲ್ಲಿ ಹಿಂದಿ ಭಾಷೆಯು ಜಾಗತಿಕ ಸಂಪರ್ಕ ಭಾಷೆ ಮತ್ತು ಸಂವಹನ ಭಾಷೆಯಾಗಿ ಮೂಡಿ ಬರಲಿದೆ ಎಂಬುದು ನಮ್ಮ ಹೆಮ್ಮೆಯಾಗಿದೆ ಎಂದರು.
“ಆರೋಹ” ಹಿಂದಿ ದಿನಾಚರಣೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಶುಭಕರಾಚಾರಿ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಫುಲ್ಲಾ. ಬಿ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಜಿ. ಎಂ. ಗೋಂಡಾ, ಪದವಿ ಕಾಲೇಜಿನವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಸತ್ಯನಾರಾಯಣ ಹತ್ವಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಬಿ. ಕಾಂ ವಿದ್ಯಾರ್ಥಿ ಧ್ರುವ ಅತಿಥಿಗಳನ್ನು ಪರಿಚಯಿಸಿದರು.