ಮುಳಬಾಗಿಲು ಸೆ-13, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಜನಸಾಮಾನ್ಯರ ಪ್ರಾಣ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಪುರಸಭೆ ಆಯುಕ್ತರಾದ ಶ್ರೀಧರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಪ್ರತಿ ವರ್ಷ ಬೀದಿನಾಯಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಹೆಚ್ಚಳ ಮಾಡಿಕೊಂಡು ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳು, ಹಿರಿಯರು, ಮತ್ತು ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ಹಾಗೂ ನಿರ್ಲಕ್ಷೆ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಮಕ್ಕಳು ಕೈಯಲ್ಲಿ ಬನ್ ಹಿಡಿಯಂಗಿಲ್ಲ ಹಿರಿಯರು ಮಹಿಳೆಯರು ಹಾಲು ಹಾಗೂ ತರಕಾರಿ ಬ್ಯಾಗ್ ಹಿಡಿದುಕೊಂಡು ಓಡಾಡುವಂತಿಲ್ಲ. ನೋಡಿದರೆ ಸಾಕು ಗುಂಪುಗುಂಪಾಗಿರುವ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿ ಗಾಯಗಳು ಗಳಿಸುವಜೊತೆಗೆ ಪ್ರಾಣವನ್ನು ತೆಗೆಯುವ ಮಟ್ಟಕ್ಕೆ ನಾಯಿ ಹಾವಳಿಗಳು ಹೆಚ್ಚಾಗಿದ್ದರೂ ನಿರ್ಲಕ್ಷೆ ಮಾಡಿ ಜನ ಸಾಮಾನ್ಯರ ಪ್ರಾಣದ ಜೊತೆ ಅಧಿಕಾರಿಗಳು ಚಲ್ಲಾಟವಾಡುತ್ತಿದ್ದಾರೆಂದು ಆರೋಪ ಮಾಡಿದರು.
ಒಂದು ಕಡೆ ಮಕ್ಕಳ ಮೇಲೆ ದಾಳಿಯಾದರೆ ಮತ್ತೊಂದು ಕಡೆ ರಸ್ತೆಗಳಲ್ಲಿ ಓಡಾಡುವ ದ್ವಿಚಕ್ರ ವಾಹನಗಳಿಗೆ ಅಡ್ಡಾಬಂದು ಏಕಾಏಕಿ ಬ್ರೇಕ್ ಹಾಕಲಾಗದೆ ವಾಹನ ಸವಾರರು ನಾಯಿಮೇಲೆ ಹತ್ತಿಸಿ ಅಪಘಾತಗಳಾಗಿ ಪ್ರಾಣವನ್ನು ಕೈಕಾಲುಗಳನ್ನು ಕಳೆದುಕೊಂಡು ಆಸ್ಪತ್ರೆ ಸೇರುವ ಜೊತೆಗೆ ಕುಟುಂಬ ಜವಾಬ್ದಾರಿ ಹೊತ್ತಿರುವ ಯುವಕರ ಹಿರಿಯರ ಪ್ರಾಣ ಪಕ್ಷಿ ಹಾರಿ ಹೋಗುವ ಪರಿಸ್ತಿತಿ ಇದ್ದರೂ ಸಮಸ್ಯೆ ಕಡೆ ಗಮನಹರಿಸದ ಆಡಳಿತ ವರ್ಗದ ವಿರುದ್ದ ಕಿಡಿಕಾರಿದರು.
ರಾಜ್ಯ ಮುಖಂಡ ಪಾರುಕ್ಪಾಷ ಮಾತನಾಡಿ ನಗರಗಳಲ್ಲಿ ಸಂಜೆ ಆದರೆ ಹೊರಗಡೆ ಬರುವಂತಿಲ್ಲ. ಗುಂಪುಗುಂಪಾಗಿರುವ ಬೀದಿ ನಾಯಿಗಳು ಏಕಾಏಕಿ ಅಟ್ಟಾಡಿಸಿಕೊಂಡು ಬಂದು ಜನ ಸಾಮಾನ್ಯರ ಮೇಲೆ ತಮ್ಮ ಪ್ರತಾಪವನ್ನು ತೋರಿಸುತ್ತಿವೆ. ಕೈಯಲ್ಲಿ ಕೋಲು ಹಿಡಿದರೆ ಮತ್ತಷ್ಟು ಕೋಪಿತರಾಗಿ, ಗುಂಪು ಗುಂಪಾಗಿ ಬಂದು ದಾಳಿ ಮಾಡುತ್ತವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಂಸದ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಹೊರ ಹಾಕುವ ತ್ಯಾಜ್ಯವೇ ಬೀದಿನಾಯಿಗಳ ಹಾವಳಿಗೆ ಕಾರಣವಾಗಿದೆ. ತಮಗೆ ಇಷ್ಟ ಬಂದ ರೀತಿ ರಸ್ತೆಗಳಲ್ಲಿ, ಚರಂಡಿಗಳಲ್ಲಿ ತ್ಯಾಜ್ಯವನ್ನು ಸುರಿದು ಹೋಗುತ್ತಾರೆ. ಇತ್ತ ನಾಯಿಗಳು, ಆಹಾರಕ್ಕಾಗಿ ಬಂದು ಆಹಾರ ಸಿಗದೆ ಇದ್ದರೆ, ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳಿಗೆ ಹೋಟೆಲ್ ಮಾಂಸದ ಅಂಗಡಿ ಮಾಲೀಕರೇ ನೇರ ಕಾರಣವೆಂದು ಆರೋಪ ಮಾಡಿದರು.
ಬೀದಿ ನಾಯಿ ಹಾವಳಿಗೆ ಕಡಿವಾಣ ಹಾಕಲು ಪ್ರತಿ ಪಂಚಾಯಿತಿಗೊಂದು ಪಾರ್ಕ್ ವ್ಯವಸ್ಥೆ ಮಾಡಿ ಕಾನೂನಿನ ಪ್ರಕಾರ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿ ಪ್ರಾಣವನ್ನು ರಕ್ಷಣೆ ಮಾಡುವ ಜೊತೆಗೆ ಜನ ಸಾಮಾನ್ಯರ ಆರೋಗ್ಯ ಜೀವವನ್ನು ಕಾಪಾಡಬೇಕು ಹಾಗೂ ನಾಯಿ ದಾಳಿಗೆ ತುತ್ತಾಗಿರುವ ಮಕ್ಕಳು ಮತ್ತು ಜನ ಸಾಮಾನ್ಯರಿಗೆ ತಾಲ್ಲೂಕು ಆಡಳಿತದಿಂದ ಚಿಕಿತ್ಸೆ ವೆಚ್ಚಕ್ಕಾಗಿ 1 ಲಕ್ಷ ಪರಿಹಾರ ನೀಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತರಾದ ಶ್ರೀಧರ್ ರವರು ಈಗಾಗಲೇ ಬೀದಿನಾಯಿಗಳ ಹಾವಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಸಂಬಂಧಪಟ್ಟಂತೆ ಸಮಸ್ಯೆ ಬಗೆ ಹರಿಸಲು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಶೀಘ್ರದಲ್ಲಿಯೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬಂಗಾರಿ ಮಂಜು, ರಾಜೇಶ್, ಸುನಿಲ್ಕುಮಾರ್, ಶ್ರೀನಿವಾಸ್, ಬಾಸ್ಕರ್, ಜುಬೇರ್ಪಾಷ, ವೇಣು, ಚಲಪತಿ, ಆನಂದರೆಡ್ಡಿ, ವಿಶ್ವ, ವಿಜಯ್ಪಾಲ್, ಮುಂತಾದವರು ಇದ್ದರು.