ಕೋಲಾರ:- ನಗರದ 12 ಕೇಂದ್ರಗಳಲ್ಲಿ ನಡೆದ 2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಯಾವುದೇ ಗೊಂದಲವಿಲ್ಲದೇ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ 4422 ಅಭ್ಯರ್ಥಿಗಳ ಪೈಕಿ ಬೆಳಗಿನ ಅವಧಿ ಪರೀಕ್ಷೆಗೆ 1630 ಮಂದಿ ಹಾಗೂ ಮಧ್ಯಾಹ್ನದ ಅವಧಿಯ ಪರೀಕ್ಷೆಗೆ 1634 ಮಂದಿ ಗೈರಾಗಿದ್ದು, ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆಗೆ ಗೈರಾದವರ ಕುರಿತು ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಕೃಷ್ಣಮೂರ್ತಿ, ಬೆಳಗ್ಗೆ 10ರಿಂದ 12 ರವರೆಗೂ ನಡೆದ ಬೆಳಗಿನ ಅವಧಿಯ ಪರೀಕ್ಷೆಗೆ ನಗರದ 12 ಕೇಂದ್ರಗಳಲ್ಲಿ ಒಟ್ಟು 4422 ಮಂದಿ ನೋಂದಾಯಿಸಿದ್ದು, ಅವರ ಪೈಕಿ 2792 ಮಂದಿ ಹಾಜರಾಗಿದ್ದರು ಮತ್ತು 1630 ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೂ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ 442 ಮಂದಿ ಪೈಕಿ 2788 ಮಂದಿ ಹಾಜರಾಗಿದ್ದು 1634 ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಪರೀಕ್ಷೆ ಯಾವುದೇ ಗೊಂದಲವಿಲ್ಲದೇ ನಡೆದಿದ್ದು, ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ಬಿ.ನಿಖಿಲ್ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಸಿದ್ದತೆಗಳು ಮತ್ತು ಪರೀಕ್ಷಾ ವಿಧಾನದ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾಡಳಿತದಿಂದ ಬಿಗಿ ಬಂದೋಬಸ್ತ್
ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳ ಧರಿಸಲು ನಿಷೇಧವಿತ್ತು. ಪೂರ್ಣ ತೋಳಿನ ಶರ್ಟ್, ಶೂಹಾಕಿದ್ದರೂ ಪ್ರವೇಶವಿರಲಿಲ್ಲ.
ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಸೂಚಿಸಲಾಗಿತ್ತು.
12ಕೇಂದ್ರಗಳಲ್ಲಿನ ಹಾಜರಾಗಿ ವಿವರ
ನಗರದ 12 ಕೇಂದ್ರಗಳಲ್ಲಿನ ಹಾಜರಾತಿ ವಿವರ ನೀಡಿರುವ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 558 ಮಂದಿ ನೋಂದಾಯಿಸಿದ್ದು 428 ಮಂದಿ ಹಾಜರಾಗಿ 130 ಮಂದಿ ಗೈರಾಗಿದ್ದರು. ಬಾಲಕರಪಿಯು ಕಾಲೇಜು ಕೇಂದ್ರದಲ್ಲಿ 480 ಮಂದಿ ಪೈಕಿ 318 ಮಂದಿ ಹಾಜರಾಗಿ 162 ಮಂದಿ ಗೈರಾಗಿದ್ದರು.
ಬಾಲಕಿಯರ ಪದವಿ ಪೂರ್ವ ಕಾಲೇಜುಕೇಂದ್ರದಲ್ಲಿ 288 ಮಂದಿ ನೋಂದಾಯಿಸಿದ್ದು, 192 ಮಂದಿ ಹಾಜರಾಗಿ 96 ಮಂದಿಗೈರಾಗಿದ್ದರು. ಕಾರಂಜಿಕಟ್ಟೆಯ ಸುಭಾಷ್ ಶಾಲೆಯಲ್ಲಿ 336 ಮಂದಿ ನೋಂದಾಯಿಸಿದ್ದು, 224 ಮಂದಿ ಹಾಜರಾಗಿ 112 ಮಂದಿ ಗೈರಾಗಿದ್ದರು. ಸೆಂಟ್ಆನ್ಸ್ ಶಾಲೆಯಲ್ಲಿ 288 ಮಂದಿ ಪೈಕಿ 171 ಮಂದಿ ಹಾಜರಾಗಿದ್ದು, 117 ಮಂದಿ ಗೈರಾಗಿದ್ದರು.
ಮೆಥೋಡಿಸ್ಟ್ ಶಾಲೆ ಕೇಂದ್ರದಲ್ಲಿ 264 ಮಂದಿ ಪೈಕಿ 153 ಮಂದಿ ಹಾಜರಾಗಿದ್ದು, 111 ಮಂದಿ ಗೈರಾಗಿದ್ದರೆ, ಅಲಮಿನ್ ಕಾಲೇಜು ಕೇಂದ್ರದಲ್ಲಿ 240 ಮಂದಿ ಪೈಕಿ 129 ಮಂದಿ ಹಾಜರಾಗಿದ್ದು, ಅಲ್ಲಿಯೂ 111 ಮಂದಿ ಗೈರಾಗಿದ್ದರು.
ಎಸ್ಡಿಸಿ ಕಾಲೇಜು ಕೇಂದ್ರದಲ್ಲಿ 576 ಮಂದಿ ಪೈಕಿ 238 ಮಂದಿ 338 ಮಂದಿ ಹಾಜರಾಗಿದ್ದು, 238 ಮಂದಿ ಗೈರಾಗಿದ್ದರು. ಚಿನ್ಮಯ ವಿದ್ಯಾಲಯ ಕೇಂದ್ರದಲ್ಲಿ 480 ಮಂದಿ ಪೈಕಿ 305 ಮಂದಿ ಹಾಜರಾಗಿದ್ದು, 175 ಮಂದಿ ಗೈರಾಗಿದ್ದರೆ, ಎಸ್ಡಿಸಿ ಇಂಡಿಪೆಂಡೆಂಟ್ ಕಾಲೇಜಿನಲ್ಲಿ 336 ಮಂದಿ ಪೈಕಿ 199 ಮಂದಿ ಹಾಜರಾಗಿದ್ದು, 137 ಮಂದಿ ಗೈರಾಗಿದ್ದಾರೆ.
ಉಳಿದಂತೆ ಮಹಿಳಾ ಸಮಾಜ ಪ್ರೌಢಶಾಲೆಕೇಂದ್ರದಲ್ಲಿ 336 ಮಂದಿ ಪೈಕಿ 197 ಮಂದಿ ಹಾಜರಾಗಿದ್ದು, 139 ಮಂದಿ ಗೈರಾಗಿದ್ದಾರೆ. ಮಹಿಳಾ ಸಮಾಜ ಪಿಯು ಕಾಲೇಜು ಕೇಂದ್ರದಲ್ಲಿ 240 ಮಂದಿ ಪೈಕಿ 138 ಮಂದಿ ಹಾಜರಾಗಿ 102 ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ ಅವರು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪರೀಕ್ಷೆ ಕಾರ್ಯಗಳಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ವೀಣಾ, ಪರೀಕ್ಷಾ ನೋಡಲ್ ಅಧಿಕಾರಿ ವಿಷಯ ಪರಿವೀಕ್ಷಕ ಶಂಕರೇಗೌಡ,ಕೇಂದ್ರಗಳಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪ್ರತಿ ಕೇಂದ್ರಕ್ಕೆ ವಿಶೇಷವಾಗಿ ನಿಯೋಜನೆ ಮಾಡಲಾಗಿತ್ತು. 4 ಕೇಂದ್ರಗಳಿಗೆ ಒಬ್ಬ ವೀಕ್ಷಕರು. 3 ಕೇಂದ್ರಗಳಿಗೆ ಒಬ್ಬರು ಮಾರ್ಗಾಧಿಕಾರಿ, ಪ್ರತಿ ಕೇಂದ್ರಕ್ಕೆ ಮುಖ್ಯಅಧೀಕ್ಷಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಲಾಗಿತ್ತು.