ಕುಂದಾಪುರ: ಸಮಕಾಲೀನ, ಸಾಮಾಜಿಕ, ಸ್ಥಿತ್ಯಂತರ ಕಾಲಘಟ್ಟದಲ್ಲಿ ನಮ್ಮ ಮಕ್ಕಳಿಗೆ ಯಾವುದೇ ಮೌಲ್ಯಗಳನ್ನು ಕಲಿಸಲು, ಕಲಿಯಲು ಬರುವುದಿಲ್ಲ. ಆದರೆ ಅಕ್ಷರ ಕಲಿಸಬಹದು ಭಾಷೆ ಕಲಿಸಬಹುದು, ವಿಜ್ಞಾನ ಕಲಿಸಬಹುದು, ಗಣಿತ ಕಲಿಸಬಹುದು. ಆದರೆ ಜೀವನ ಮೌಲ್ಯವು ರೂಢಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಅದನ್ನು ವಿದ್ಯಾರ್ಥಿ ದೆಸೆಯಿಂದಲೇ ಅನುಷ್ಠಾನಗೊಳಿಸಿದಾಗ ಅವರಲ್ಲಿ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಅಶೋಕ್ ಭಂಡಾರಿ, ಅಧ್ಯಕ್ಷರು ಗ್ರಾಮ ಪಂಚಾಯತ್, ಕೋಣಿ ಇವರು ತಿಳಿಸಿದರು.
ಅವರು ದಿನಾಂಕ 13-07-2024 ಶನಿವಾರದಂದು ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ಗ್ರಾಮ ಪಂಚಾಯತ್ ಕೋಣಿ ಹಾಗೂ ಕೆ.ಜಿ. ಜಗನ್ನಾಥ ರಾವ್ ಸರಕಾರಿ ಪ್ರೌಢಶಾಲೆ, ಕೋಣಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಎಂಬ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜೀವನ ಮೌಲ್ಯಗಳು ಪ್ರತೀ ಹಂತದಲ್ಲೂ ಅಳವಡಿಸಿಕೊಳ್ಳಬೇಕು. ನಮ್ಮ ಮಾತು, ನಡೆ-ನುಡಿ, ಸಹಕಾರ, ಪರಸ್ಪರ ನಂಬಿಕೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಭಾಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಶ್ರೀಮತಿ ಭಾರತಿ ನಾಯಕ್ ನಿರ್ವಹಿಸಿ ನಮ್ಮ ನಿತ್ಯ ಅನುಕ್ರಮ, ಅನುಸಂಧಾನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತದೆ. ನಾವು ವ್ಯಕ್ತಿತ್ವವನ್ನು ಕೇವಲ ಪ್ರತಿಷ್ಠಿತ ವ್ಯಕ್ತಿಗಳಿಂದ ನಿರೀಕ್ಷಿಸುವುದಲ್ಲ ನಮ್ಮ ಸುತ್ತ-ಮುತ್ತಲಿನ ನೆರೆ-ಹೊರೆಯವರಲ್ಲಿ, ಪೋಷಕರಲ್ಲಿ ಗುರುತಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ವಿದ್ವಾನ್ ಶ್ರೀ ಮಾಧವ ಅಡಿಗ, ನಿವೃತ್ತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕೋಣಿ ಮಾತಾಡಿ ಪ್ರತಿ ಮಗು ಕೂಡಾ ಮೌಲ್ಯವಾಗಿರುತ್ತದೆ. ಮುಂದೆ ಮಗು ಬೆಳೆಯುತ್ತಾ ಬೆಳೆಯುತ್ತಾ ಅನೇಕ ಸಾಮಾಜಿಕ ಕಟ್ಟುಪಾಡುಗಳಿಂದ ನಿಗ್ರಹಿಸಿ ಮೌಲ್ಯಗಳನ್ನು ಅನುಷ್ಠಾನ ಮಾಡಬೇಕಾಗಿದೆ. ಪ್ರತೀ ಮಗು ಕೂಡಾ ನಿಷ್ಪ್ರಯೋಜಕ ಎಂದು ಪರಿಭಾವಿಸಬಾರದು.
ಸಭೆಯಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ನಾಗರಾಜ ಆಚಾರ್ ಕೋಣಿ, ಖ್ಯಾತ ಉದ್ಯಮಿ ಹಾಗೂ ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಹಾಸ್ ಮೊಗವೀರ, ಅಭಿವೃದ್ಧಿ ಸಂಸ್ಥೆ (ರಿ. ) ಬಾಳ್ಕುದ್ರು ಹಂಗಾರಕಟ್ಟೆ ಇದರ ಕಾರ್ಯದರ್ಶಿ ಶ್ರೀ ರಮೇಶ್ ವಕ್ವಾಡಿ, ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್, ಮುಖ್ಯಶಿಕ್ಷಕರು ಸರಕಾರಿ ಪ್ರೌಢಶಾಲೆ ಹೆಸ್ಕೆತ್ತೂರು (ಕುಂದಾಪುರ ವಲಯ) ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್ ಮಾತಾಡಿ ಮಕ್ಕಳಿಗೆ ನಮ್ಮ ಅನೇಕ ಪುರಾಣ ಕಥೆಗಳಲ್ಲಿ, ಜೀವನ ಮೌಲ್ಯಗಳು ಸಿಗುತ್ತದೆ. ಉದಾಹರಣೆಗೆ : ಮಹಾಭಾರತದ ಸುಯೋಧನನಿಗೆ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದು ತಿಳಿದು ಪಾಂಡವರನ್ನು ದ್ವೇಷಿಸುತ್ತಾ, ತನ್ನ ಅವಸಾನವನ್ನು ಕಂಡುಕೊಂಡ ಬಗ್ಗೆ ವಿವರಿಸಿ ನಾವು ಪ್ರತೀ ಹಂತದಲ್ಲೂ ಸಹಕಾರ ಮತ್ತು ಹೊಂದಾಣಿಕೆ ಮನೋಭಾವ ಇದ್ದಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಧ್ಯ ಎಂದರು. ಅಲ್ಲದೇ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಶಾಲಾ ಪಠ್ಯದಿಂದ ಮಾತ್ರವಲ್ಲ ನಮ್ಮ ಸಾಮಾಜಿಕ ನಡವಳಿಕೆಯಿಂದ ಮೌಲ್ಯಗಳನ್ನು ಗುರುತಿಸಿಕೊಳ್ಳಲು ವಿದ್ಯಾರ್ಥಿಗಳು ಸಿದ್ಧರಾಗಬೇಕೆಂದು ಮಾಹಿತಿ ನೀಡಿ ಸಂವಾದ ನಡೆಸಿದರು.
ಈ ಕಾರ್ಯಕ್ರಮವನ್ನು ಸುಧಾ ಭಟ್ ನಿರೂಪಿಸಿ, ರೂಪಶ್ರೀ ಸ್ವಾಗತಿಸಿ, ರಮೇಶ್ ವಕ್ವಾಡಿ ಪ್ರಾಸ್ತವನೆಗೈದು ವಂದಿಸಿದರು. ಸುಮಾರು 86 ವಿದ್ಯಾರ್ಥಿಗಳು ಸಹಶಿಕ್ಷಕರು, ಪೋಷಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು