ಶ್ರೀನಿವಾಸಪುರ : ಸಂರಕ್ಷಣೆಯಲ್ಲಿ ಸರಕಾರಿ ಆಸ್ತಿ ಕೋಲಾರ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ – ಜಿಲ್ಲಾಧಿಕಾರಿ ಅಕ್ರಂಪಾಷಾ ಈ ಕುರಿತು ಮಾಹಿತಿ ನೀಡಿರುವ ಅವರು, ರಾಜ್ಯಾದ್ಯಂತ ಇರುವ ಸರಕಾರಿ ಜಮೀನುಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಸಮಸ್ಯೆ ಮತ್ತು ಇವುಗಳನ್ನು ತೆರವುಗೊಳಿಸಲು ನಡೆಸಬೇಕಾದ ಹಲವು ವರ್ಷಗಳ ಕಾನೂನು ಹೋರಾಟಗಳು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಸರಕಾರಿ ಆಸ್ತಿಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಇವು ಖಾಸಗಿಯವರ ಪಾಲಾಗದಂತೆ ರಕ್ಷಿಸಿ, ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲ್ಯಾಂಡ್ ಬೀಟ್ ಆಪ್ ಬಳಸಿಕೊಂಡು, ವಿವಿಧ ಜಮೀನುಗಳಲ್ಲಿರುವ ಸರಕಾರಿ ಭೂಮಿಯನ್ನು ಜಿಯೋ ಫೆನ್ಸಿಂಗ್ ಮಾಡಿ, ರಕ್ಷಣೆ ಮಾಡುವ ಕಾರ್ಯದಲ್ಲಿ ಕೋಲಾರ ಜಿಲ್ಲೆಯು ಇಡೀ ರಾಜ್ಯದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸರಕಾರಿ ಆಸ್ತಿಗಳು ಇರುವ ಒಟ್ಟು 34375 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಪೈಕಿ 27451 ಸ್ಥಳಗಳಿಗೆ ಗ್ರಾಮ ಆಡಳಿತ ಅಕಾರಿಗಳು ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಈ ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಇದು ರಾಜ್ಯದಲ್ಲಿಯೇ ಅತ್ಯಕ ಸಂಖ್ಯೆಯಾಗಿದೆ. ಈ ಜಮೀನುಗಳಲ್ಲಿರುವ ಸರಕಾರಿ ಆಸ್ತಿಗಳ ಬಗ್ಗೆ ಸಂಬಂಧಪಟ್ಟ ಗ್ರಾಮ ಅಕಾರಿಗಳು, ತಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ಲ್ಯಾಂಡ್ ಬಿಟ್ ಆಪ್ ಮೂಲಕ ವರದಿ ನೀಡಿದ್ದು, ಆ ವರದಿಯನ್ನು ಸಂಬ೦ಧಪಟ್ಟ ತಾಲೂಕಿನ ತಹಶೀಲ್ದಾರ್ಗಳು ಅಂತಿಮಗೊಳಿಸುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ 27451 ಸರಕಾರಿ ಆಸ್ತಿಗಳಿಗೆ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯ ಈ ಸರಕಾರಿ ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಆಡಳಿತ
ಜಿಲ್ಲೆಯಲ್ಲಿ ಇದುವರೆಗೆ ಕೋಲಾರ ತಾಲೂಕಿನಲ್ಲಿನ 8920 ಸರಕಾರಿ ಆಸ್ತಿಗಳಲ್ಲಿ 7067 ಆಸ್ತಿಗಳಿಗೆ ಜಿಯೋ ಫೆನ್ಸಿಂಗ್ ಕಾರ್ಯ ಮಾಡಲು ಸ್ಥಳ ಭೇಟಿ ನಡೆಸಿ ವರದಿ ನೀಡಿದ್ದು, ಶೇ 85.72%ಆಸ್ತಿಗಳಿಗೆ ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಬಂಗಾರಪೇಟೆ ತಾಲೂಕಿನ 3320ಸರಕಾರಿ ಆಸ್ತಿಗಳಲ್ಲಿ 2835 ಆಸ್ತಿಗಳಿಗೆ, ಕೆ ಜಿ ಎಫ್ ತಾಲೂಕಿನ 2895 ಆಸ್ತಿಗಳಲ್ಲಿ 2421 ಆಸ್ತಿಗಳಿಗೆ, ಮುಳಬಾಗಿಲು ತಾಲೂಕಿನ 7294 ಆಸ್ತಿಗಳಲ್ಲಿ 5883 ಆಸ್ತಿಗಳಿಗೆ, ಶ್ರೀನಿವಾಸಪುರ ತಾಲೂಕಿನ 6394 ಆಸ್ತಿಗಳಲ್ಲಿ 5394 ಆಸ್ತಿಗಳಿಗೆ ಹಾಗೂ ಮಾಲೂರು ತಾಲೂಕಿನ 5552 ‘ಆಸ್ತಿಗಳಲ್ಲಿ 4602 ಆಸ್ತಿಗಳಿಗೆ, ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್ ಮಾಡಲಾಗಿದೆ.
ಈ ಲ್ಯಾಂಡ್ ಬೀಟ್ ಆಪ್ನಲ್ಲಿ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳಾದ ಗೋಮಾಳ, ಹುಲ್ಲು ಬನ್ನಿ ಖರಾಬು, ಸರ್ಕಾರಿ ಫಡಾ, ಸರ್ಕಾರಿ ಖರಾಬು, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿದಾರಿ, ಗುಂಡು ತೋಪು ಇತ್ಯಾದಿ ಹಾಗೂ ಸರ್ಕಾರಿ ಕೆರೆ ಮತ್ತು ಸರ್ಕಾರಿ ಸ್ಮಶಾನಗಳನ್ನು ಸಂಬ೦ಧಪಟ್ಟ ಗ್ರಾಮ ಆಡಳಿತ ಅಕಾರಿಗಳು ಲ್ಯಾಂಡ್ ಬೀಟ್ ತಂತ್ರಾ0ಶದಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ಮಾಡಿದ್ದಾರೆ.
ಸರ್ಕಾರಿ ಜಮೀನುಗಳ ಪೈಕಿ ಅರಣ್ಯ ಜಮೀನುಗಳು, ಇತರೆ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳು (ಭೂಸ್ವಾಧೀನ), ಶಾಲೆಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳಂತಹ ಇತರ ಜಮೀನುಗಳನ್ನು ಒಳಗೊಂಡಿದ್ದು, ಇಲಾಖೆಗಳ ಇಂತಹ ಜಮೀನುಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳಿಗೆ ಕಳುಹಿಸಲು ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆಗಳಿಗೆ ಹಾಗೂ ವಸತಿ ಯೋಜನೆಗಳ ಫಲಾನುಭವಿಗಳಿಗೆ ಸೇರಿದಂತೆ ಅಗತ್ಯವಿರುವವರಿಗೆ ಭೂಮಿಯನ್ನು ಮಂಜೂರು ಮಾಡಲು ಸರಕಾರಿ ಭೂಮಿಯ ಕೊರತೆಯಿದೆ. ಅಲ್ಲದೇ ಈಗಾಗಲೇ ಸರಕಾರಿ ಭೂಮಿ ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಪ್ರಕ್ರಿಯೆಯು ದೀರ್ಘವಾಗಿರುವ ಜೊತೆಗೆ ಸಂಕೀರ್ಣವಾಗಿದೆ. ಸರಕಾರದ ಸೂಚನೆಯಂತೆ ಲ್ಯಾಂಡ್ ಬೀಟ್ ಆಪ್ ಮೂಲಕ ಜಿಲ್ಲೆಯಲ್ಲಿನ ಸರಕಾರಿ ಭೂಮಿಗಳನ್ನು ಗುರುತಿಸಿ, ಜಿಯೋ ಫೆನ್ಸಿಂಗ್ ಮಾಡುವ ಮೂಲಕ ಅವುಗಳನ್ನು ಸಂರಕ್ಷಿಸುವ ಕಾರ್ಯವನ್ನು ಸಮರೋಪಾದಿಯಲಿ ಕೈಗೊಂಡಿದ್ದು, ಈ ಕಾರ್ಯ ಪೂರ್ಣಗೊಂಡ ನಂತರ ಜಿಲ್ಲೆಯಲ್ಲಿ ಲಭ್ಯವಿರುವ ಸರಕಾರಿ ಜಮೀನಿನ ನಿಖರ ಪ್ರಮಾಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇವುಗಳ ಅತಿಕ್ರಮಣವಾಗದಂತೆ ತಡೆಯುವ ಮೂಲಕ ಸಾರ್ವಜನಿಕ ಉದ್ದೇಶಗಳಿಗೆ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ದೊರೆಯಲಿದೆ.