ಕೋಲಾರ:- ಕಾಲಕ್ಕೆ ಎದುರಾಗಿ ಹೋಗುತ್ತಿರುವ ಇತರೆಲ್ಲಾ ಮಾಧ್ಯಮಗಳೊಂದಿಗೆ ಸೆಣಸುವುದು ಮುದ್ರಣ ಮಾಧ್ಯಮಕ್ಕೆ ಸವಾಲಾಗಿದೆ ಮತ್ತು ಯಾರು ಪತ್ರಕರ್ತರು ಎಂಬುದನ್ನು ನಿಷ್ಕರ್ಷೆ ಮಾಡುವ ಕಾಲದಲ್ಲಿರುವ ಸುದ್ದಿ ಮಾಧ್ಯಮ ಇಂದು ಸಂಕಟದಲ್ಲಿದೆ ಎಂದು ತಿಳಿಸಿದ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಜಿಲ್ಲೆಯ ಪತ್ರಕರ್ತರಿಗಾಗಿ ವಿವಿಯಿಂದ ಡಿಪ್ಲೊಮೋ ಕೋರ್ಸ್ ತೆರೆಯುವ ಭರವಸೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪತ್ರಿಕಾದಿನ, ವೈದ್ಯರ ದಿನ,ಲೆಕ್ಕಪರಿಶೋಧಕರ ದಿನ ಎಲ್ಲವೂ ಜು.1 ಆಗಿದೆ ವೈದ್ಯರು ದೇಹಕ್ಕೆ ಒಳಿತಾಗುವ ಕೆಲಸ ಮಾಡುವಂತೆ ಪತ್ರಕರ್ತರು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದು, ಮಾಧ್ಯಮ ಪ್ರತಿನಿಧಿಗಳು ಸಮಾಜದ ವೈದ್ಯರು ಎಂದು ಅಭಿಪ್ರಾಯಪಟ್ಟರು.
ಸಮಾಜದ ನಾಡಿಮಿಡಿತ ಅರ್ಥಮಾಡಿಕೊಂಡು ಸಾಗಬೇಕಾದ ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಯೂ ಅಗತ್ಯವಿದೆ, ಇಡೀ ಮಾಧ್ಯಮ ಬದಲಾವಣೆ ಹಂತದಲ್ಲಿದ್ದು, ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಚಾಲನೆ, ಫೇಸ್ಬುಕ್ಗಳು ಯಾರ ಹಂಗಿಲ್ಲ ಇವಕ್ಕೆ ಗೇಟ್ ಕೀಪರ್ ಇಲ್ಲ ಆದರೆ ಮುದ್ರಣ ಮಾಧ್ಯಮಕ್ಕೆ ಗೇಟ್ ಕೀಪರ್ ಇದ್ದು, ಈ ಎಲ್ಲದರ ನಡುವೆಯೂ ವಸ್ತುನಿಷ್ಟವಾದ ಸುದ್ದಿಸಂಪ್ರದಾಯ ಪಾಲಿಸಿಕೊಂಡು ಬಂದಿದೆ ಎಂದರು.
ಪತ್ರಕರ್ತರಿಗಾಗಿಯೇ ಡಿಪ್ಲೋಮೋ ಕೋರ್ಸ್
ಬೆಂಗಳೂರು ಉತ್ತರ ವಿವಿಯಿಂದ ಹಾಲಿ ಪತ್ರಕರ್ತರಿಗಾಗಿಯೇ ಡಿಪ್ಲೋಮೋ ಕೋರ್ಸ್ ತೆರೆಯಲು ತಾವು ಸಿದ್ದರಿದ್ದು, ಶನಿವಾರ,ಭಾನುವಾರವೂ ತರಗತಿ ನಡೆಸುವ ಮೂಲಕ ನೀವು ಸಹಕಾರ ನೀಡಿದರೆ ಪತ್ರಿಕಾ ಭವನದಲ್ಲೇ ತರಗತಿ ನಡೆಸಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಪತ್ರಿಕೋದ್ಯಮದ ಮೌಲ್ಯ ಕಾಪಾಡಿಕೊಳ್ಳಲು ಭಾಷೆಯ ಅಗತ್ಯವಿದೆ, ಪತ್ರಿಕೋಧ್ಯಮ ತರಗತಿಗೆ ಬರುವ ಅನೇಕರಿಗೆ ಕನ್ನಡ,ಇಂಗ್ಲೀಷ್ ಬರೊಲ್ಲ ಆದ್ದರಿಂದ ಮೊದಲು ಭಾಷೆ ಕಟ್ಟುವ ಕೆಲಸವಾಗಬೇಕು ಎಂದು ತಿಳಿಸಿದರು.
ಇತರೆ ಮಾಧ್ಯಮ ದಾರಿ ತಪ್ಪಿದರೂ ಮುದ್ರಣ ಮಾಧ್ಯಮ ದಾರಿ ತಪ್ಪಬಾರದು ಎಂದ ಅವರು, ಇಂದು ಅಸ್ಥಿತ್ವದ ಪ್ರಶ್ನೆ ಎದುರಾಗಿದ್ದು, ಎಲ್ಲಾ ಸವಾಲು ಮೆಟ್ಟಿನಿಂದು ತಮ್ಮತನ ಉಳಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಸ್ವಂತ ಶಕ್ತಿಯಿಂದ ಹಾಗೂ ಸ್ವಂತ ಭವನದಲ್ಲೇ ನಮ್ಮ ಪತ್ರಿಕಾದಿನಾಚರಣೆ ಮಾಡಬೇಕು ಎಂಬ ಆಶಯ ಈಡೇರಿದೆ, ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಕಳೆದ 25 ವರ್ಷಗಳಿಂದ ಆತ್ಮಸಾಕ್ಷಿಗನುಗುಣವಾಗಿ ಸಾಗಿ ಬಂದಿದ್ದೇವೆ ಎಂದರು.
ಇಂದು ಇಡೀ ಪತ್ರಿಕೋದ್ಯಮಕ್ಕೆ ಗೇಟ್ ಕೀಪರ್ ಅಗತ್ಯವಿದೆ, ನಾವು ಯಡವಟ್ಟು ಮಾಡಿ ಸುದ್ದಿ ಮಾಡಿದರೆ ಅದರಿಂದ ಸಮಾಜಕ್ಕೆ ಹಾನಿ ಎಂದು ಎಚ್ಚರಿಸಿದ ಅವರು, ಮಕ್ಕಳು ಕೇವಲ ಇಂಜಿನಿಯರ್ ಡಾಕ್ಟರ್ ಮಾತ್ರವಲ್ಲ ಪತ್ರಕರ್ತರಾಗಿ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೆಳೆಯಬಹುದಾಗಿದೆ ಅದಕ್ಕೆ ನಮ್ಮ ಜಿಲ್ಲೆಯವರೇ ಆದ ಕಾಮರೂಪಿ ಪ್ರಭಾಕರ್, ಸಚ್ಚಿ, ಪ್ರಭಾಕರ್ ಮತ್ತಿತರರು ಸಾಕ್ಷಿಯಾಗಿದ್ದಾರೆ ಎಂದರು.
ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವಹೊಳ್ಳ ಮಾತನಾಡಿ, ರಾಜ್ಯದ ಪತ್ರಕರ್ತರ ಭವನ ರಾಜ್ಯಕ್ಕೆ ಮಾದರಿಯಾಗಿದೆ, ಕೋಲಾರ ಜಿಲ್ಲೆಯ ಪತ್ರಕರ್ತರು ರಾಜ್ಯದ ಎಲ್ಲಾ ದೊಡ್ಡಪತ್ರಿಕೆಗಳು,ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮಾತನಾಡಿ, ಪತ್ರಕರ್ತರು ಒತ್ತಡದಿಂದ ಕೆಲಸ ಮಾಡುವುದು ಬೇಡ, ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ತಿಳಿಸಿ, ಇತ್ತೀಚೆಗೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಒಂದೇ ಸುದ್ದಿಯನ್ನು ನಿರಂತರವಾಗಿ ತೋರಿಸುತ್ತಿದ್ದು ಇದು ಸರಿಯಲ್ಲ ಎಂದ ಅವರು, ಆ ಸುದ್ದಿಗಳ ಜತೆಗೆ ಸಮಾಜಮುಖಿ ಸುದ್ದಿಗಳನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ವಿಜಯವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ ವಿತರಿಸಿ, ಜಿಲ್ಲೆಯ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಶುಭಾಷಯ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಲಾರದ ಪತ್ರಿಕಾರಂಗಕ್ಕೆ ನೂರು ವರ್ಷಗಳ ಇತಿಹಾಸವಿದೆ, 181 ವರ್ಷಗಳ ಹಿಂದೆಯೇಧ ಪತ್ರಿಕಾರಂಗದ ಭೀಷ್ಮರಾದ ಡಿ.ವಿ.ಗುಂಡಪ್ಪ ಅವರು ಭಾರತ, ಕರ್ನಾಟಕ, ಸುಮತಿ ಪತ್ರಿಕೆಗಳನ್ನು ಆರಂಭಿಸಿದ್ದರು ಹಾಗೆಯೇ ನಾಗಪ್ಪ ಅವರು ಕೈಬರಹದ ಪತ್ರಿಕೆ ಹೊರತಂದಿದ್ದರು ಎಂದು ಸ್ಮರಿಸಿದರು.
ಎಸ್ಸೆಸ್ಸೆಲ್ಸಿ,ಪಿಯುಸಿ ಪದವಿಯಲ್ಲಿ ಸಾಧನೆ ಮಾಡಿದ 32 ಮಂದಿ ಪತ್ರಕರ್ತರ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು. ಜಿಲ್ಲೆಯ ಹಿರಿಯ ಸಾಧಕರ ಹೆಸರಿನಲ್ಲಿ 9 ಮಂದಿ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಗರದ ವಂಶೋದಯ ಆಸ್ಪತ್ರೆಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮಹಮದ್ ಯೂನಸ್ ಉಪಸ್ಥಿತರಿದ್ದು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿದರು. ಟಿ.ಕೆ.ನಾಗರಾಜ್ ಸ್ವಾಗತಿಸಿದರು. ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲೆಯ ಹಿರಿಯ ಪತ್ರಕರ್ತರು, ವಿವಿಧತಾಲ್ಲೂಕುಗಳ ಪದಾಧಿಕಾರಿಗಳು,ಪತ್ರಕರ್ತರು ಹಾಜರಿದ್ದರು.