ಕೋಲಾರ:- ನಗರ ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ಎಪಿಎಂಸಿ ಮಾರುಕಟ್ಟೆಯ ಆರ್.ವಿ.ಎಂ ಮಂಡಿಯ ಚಲಪತಿ ತಮ್ಮ ನಿವಾಸಕ್ಕೆ ಬೆಂಗಳೂರುನಗರ ದೇವತೆ ಅಣ್ಣಮ್ಮ ದೇವಿಯ ಉತ್ಸವ ಮೂರ್ತಿಯನ್ನು ತಂದು ಲೋಕಕಲ್ಯಾಣಕ್ಕಾಗಿ ಹಾಗೂ ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿ,ಒಳ್ಳೆಯ ಮಳೆ,ಬೆಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರು ನಗರದೇವತೆ ಅಣ್ಣಮ್ಮದೇವಿಯ ಭವ್ಯ ಉತ್ಸವ ಮೂರ್ತಿಗೆ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಿದ್ದು, ಗ್ರಾಮದ ನೂರಾರು ಮಂದಿ ಆಗಮಿಸಿ ಪೂಜೆ ಸಲ್ಲಿಸಿದರು.
ಎಪಿಎಂಸಿ ಮಾರುಕಟ್ಟೆಯ ಎಲ್ಲಾ ವರ್ತಕರು,ಕಾರ್ಮಿಕರು, ಅಧಿಕಾರಿಗಳು ಸಿಬ್ಬಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಚಲಪತಿ ಬೆಂಗಳೂರು ನಗರದೇವತೆ ಅಣ್ಣಮ್ಮ ದೇವಿಯ ಉತ್ಸವ ಮೂರ್ತಿಯನ್ನು ಕೋಲಾರಕ್ಕೆ ತಂದು ಪೂಜೆ ಸಲ್ಲಿಸುವ ಹರಕೆ ಇತ್ತು ಅದನ್ನು ತೀರಿಸಿದ್ದೇವೆ, ಕೋಲಾರ ಜಿಲ್ಲೆಗೆ ಅಂಟಿರುವ ಬರ ಕಳೆದು ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಚಲಪತಿಕುಟುಂಬದವರು ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸುವುದರ ಜತೆಗೆ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಸಿದ್ದು, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮುಖಂಡರಾದ ಲಕ್ಷ್ಮೀಪತಿ,ವಕ್ಕಲೇರಿ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಶಿಕ್ಷಕ ನಾರಾಯಣಸ್ವಾಮಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಮಂಜುನಾಥ್, ವೇಮಗಲ್ ಸುರೇಶ್ ಮತ್ತಿತರರು ಪೂಜೆಯಲ್ಲಿ ಹಾಜರಿದ್ದರು.